ಶಿವಮೊಗ್ಗ: ಸರ್ಕಾರಿ ಶಾಲೆ, ಕಾಲೇಜು, ಕಟ್ಟಡ, ಜಮೀನು ಉಳಿಸಿಕೊಳ್ಳಲು ಮುಂಬರುವ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ನಮ್ಮ ಹಿರಿಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಶಾಲೆಗಳ ನಿರ್ಮಾಣಕ್ಕೆ ದಾನವಾಗಿ ಭೂಮಿ ನೀಡಿದ್ದರು. ಭೂಮಿ ದಾನ ನೀಡಿದ್ದಕ್ಕೆ ಸಂಬಂಧಿಸಿದಂತೆ ದಾಖಲೆಗಳು ವರ್ಗಾವಣೆಯಾಗದೆ ಸಮಸ್ಯೆ ಎದುರಾಗಿದೆ. ದಾನ ನೀಡಿದ ಕುಟುಂಬದವರ ಮಕ್ಕಳು, ಮೊಮ್ಮಕ್ಕಳು ಈಗ ಭೂಮಿ ತಮಗೆ ಸೇರಿದೆ ಎಂದು ತಕರಾರು ತೆಗೆಯುತ್ತಿದ್ದಾರೆ. ಹಲವು ಕಡೆ ಪ್ರಕರಣ ಕೋರ್ಟ್ ಮೆಟ್ಟಿಲೇರಿವೆ. ಕಟ್ಟಡ ಉಳಿಸಿಕೊಂಡು ಭೂಮಿಯನ್ನು ಬಿಟ್ಟು ಕೊಡುವಂತೆ ಹೇಳುತ್ತಿದ್ದಾರೆ ಎಂದರು.
ಮತ್ತೊಂದು ಕಡೆ ಶಾಲೆಗಳ ಹೆಸರಿನಲ್ಲಿದ್ದ ಭೂಮಿಯನ್ನು ಸಾಗುವಳಿ ಮಾಡುವವರು ಹಲವು ದಶಕಗಳ ಸಾಗುವಳಿ ಆಧಾರದ ಮೇಲೆ ತಮ್ಮ ಹೆಸರಿಗೆ ಭೂಮಿ ವರ್ಗಾವಣೆ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ. ಶಾಲೆಗಳ ಕಟ್ಟಡ ಮತ್ತು ಭೂಮಿಯನ್ನು ಉಳಿಸಿಕೊಳ್ಳಬೇಕಿದೆ. ಅಲ್ಲದೆ, ಶಾಲಾ ಜಮೀನು ಸಾಗುವಳಿ ಮಾಡುತ್ತಿರುವ ಬಡವರಿಗೆ ಸೂಕ್ತ ನ್ಯಾಯ ಕಲ್ಪಿಸಬೇಕಿದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಕಾನೂನು ರೂಪಿಸುವ ಸಂಬಂಧ ಮುಂಬರುವ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

