ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 2026ರ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯ ನಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಡೈನ್ ಡಿ ಕ್ಲೆರ್ಕ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿ ಆರ್‌ಸಿಬಿಗೆ 155 ರನ್‌ಗಳ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ದಾಖಲಿಸಿ 3 ವಿಕೆಟ್‌ಗಳ ಗೆಲುವು ಕಂಡಿತು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಮೆಲಿಯಾ ಕೆರ್ 4 ಹಾಗೂ ಜಿ ಕಮಲಿನಿ 32 ರನ್ ಬಾರಿಸಿದರು. ಇನ್ನುಳಿದಂತೆ ನ್ಯಾಟ್ ಸೀವರ್ ಬ್ರಂಟ್ 4, ನಾಯಕಿ ಹರ್ಮನ್ ಪ್ರೀತ್ ಕೌರ್ 20, ನಿಕೋಲ ಕ್ಯಾರಿ 40, ಸಜೀವನ್ ಸಂಜನಾ 45, ಅಮನ್‌ಜೋತ್ ಕೌರ್ ಹಾಗೂ ಪೂನಮ್ ಖೆನ್ಮರ್ ಯಾವುದೇ ರನ್ ಬಾರಿಸದೇ ಅಜೇಯರಾಗಿ ಉಳಿದರು.
ಆರ್‌ಸಿಬಿ ಪರ ನಡೈನ್ ಡಿ ಕ್ಲರ್ಕ್ 4 ವಿಕೆಟ್, ಶ್ರೇಯಾಂಕ ಪಾಟೀಲ್ ಹಾಗೂ ಲಾರೆನ್ ಬೆಲ್ ತಲಾ ಒಂದೊಂದು ವಿಕೆಟ್ ಪಡೆದರು.
ಆರ್‌ಸಿಬಿ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ 25 ಹಾಗೂ ನಾಯಕಿ ಸ್ಮೃತಿ ಮಂಧಾನ 18 ರನ್ ಗಳಿಸಿದರು. ಇನ್ನುಳಿದಂತೆ ದಯಾಳನ್ ಹೇಮಲತಾ 7, ರಿಚಾ ಘೋಷ್ 6, ರಾಧಾ ಯಾದವ್ 1, ಅರುಂಧತಿ ರೆಡ್ಡಿ 20, ಶ್ರೇಯಾಂಕ ಪಾಟೀಲ್ 1, ಪ್ರೇಮಾ ರಾವತ್ ಅಜೇಯ 1 ರನ್ ಹಾಗೂ ನಡೈನ್ ಡಿ ಕ್ಲೆರ್ಕ್ ಅಜೇಯ 63 ರನ್ ಬಾರಿಸಿದರು.
ಕೇವಲ 65 ರನ್‌ಗೆ ತನ್ನ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಸಾಗುತ್ತಿದ್ದ ಆರ್‌ಸಿಬಿಗೆ ಅರಂಧತಿ ರೆಡ್ಡಿ ಹಾಗೂ ಡಿ ಕ್ಲೆರ್ಕ್ ಜೋಡಿ 52 ರನ್‌ಗಳ ಜತೆಯಾಟವಾಡುವ ಮೂಲಕ ಸುಧಾರಣೆ ತಂದಿತು. ಇನ್ನು ಕೊನೆಯ ಓವರ್‌ನಲ್ಲಿ ಗೆಲ್ಲಲು 18 ರನ್ ಬೇಕಿದ್ದಾಗ ಸೀವರ್ ಬ್ರಂಟ್ ಎಸೆದ ಮೊದಲ ಎರಡು ಎಸೆತಗಳಿಗೆ ಯಾವುದೇ ರನ್ ಬಾರಿಸದ ಡಿ ಕ್ಲೆರ್ಕ್ ನಂತರ ಕೊನೆಯ ನಾಲ್ಕು ಎಸೆತಗಳಿಗೆ 6,4,6,4 ರನ್ ಚಚ್ಚಿ ಕೊನೆಯ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮುಂಬೈ ಇಂಡಿಯನ್ಸ್ ಪರ ನಿಕೋಲ ಕ್ಯಾರಿ ಹಾಗೂ ಅಮೆಲಿಯಾ ಕೆರ್ ತಲಾ 2 ವಿಕೆಟ್, ನ್ಯಾಟ್ ಸೀವರ್ ಬ್ರಂಟ್, ಶಬ್ನಿಮ್ ಇಸ್ಮಾಯಿಲ್ ಹಾಗೂ ಅನಮ್‌ಜೋತ್ ಕೌರ್ ತಲಾ ಒಂದೊಂದು ವಿಕೆಟ್ ಪಡೆದರು.

