ಗಡ್ ಚಿರೋಲಿ: ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ , ಆಧುನಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ದೇಶದ ಹಲವು ಹಳ್ಳಿಗಳಲ್ಲಿ ಮೂಲಸೌಕರ್ಯ, ವೈದ್ಯಕೀಯ ಸೌಲಭ್ಯಗಳೂ ಇಲ್ಲದ ಕುಗ್ರಾಮಗಳು ಸಾಕಷ್ಟಿವೆ. ಇಂತಹ ಸೌಲಭ್ಯಗಳಿಲ್ಲದೇ ಸಂಕಷ್ಟಕ್ಕೀಡಾದ ತುಂಬುಗರ್ಭಿಣಿಯೊಬ್ಬರು ಸಹಾಯಕ್ಕಾಗಿ ಕೋರುತ್ತಾ 6 ಕಿ.ಮೀವರೆಗೆ ನಡೆದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದು ನಿಜಕ್ಕೂ ಜನಪ್ರತಿನಿಧಿಗಳ ಬೇಜವಾಬ್ದಾರಿಯ ಪರಮಾವಧಿಗೆ ಹಿಡಿದ ಕೈಗನ್ನಡಿ. ಚುನಾವಣೆಯಲ್ಲಿ ಆಯ್ಕೆಯಾಗುವ ನಾಯಕರು ಹಳ್ಳಿ, ಗ್ರಾಮಗಳ ಅಭಿವೃದ್ಧಿಗೆ ಕಿಂಚಿತ್ತಾದರೂ ಗಮನ ಹರಿಸಿದರೆ ಅದೆಷ್ಟೋ ಗ್ರಾಮಗಳಲ್ಲಿ ಮೂಲಸೌಕರ್ಯಗಳಾದರು ದೊರೆಯುತ್ತಿತ್ತು.
ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮುಖ್ಯ ರಸ್ತೆಯಿಂದ ಸಂಪರ್ಕ ಕಡಿತಗೊಂಡಿರುವ ಹಾಗೂ ವೈದ್ಯಕೀಯ ಮೂಲಭೂತ ಸೌಕರ್ಯವೂ ಇಲ್ಲ ಕುಗ್ರಾಮವೊಂದರ ತುಂಬು ಗರ್ಭಿಣಿ ಹೆರಿಗೆಗಾಗಿ 6 ಕಿ.ಮೀವರೆಗೆ ನಡೆದುಕೊಂಡು ಹೋಗಿದ್ದಾರೆ. ಕಾಡಿನ ದಾರಿಯಲ್ಲಿ ತುಂಬು ಗರ್ಭಿಣಿ ಸುದೀರ್ಘವಾಗಿ ನಡೆದ ಪರಿಣಾಮ ಆಕೆ ಸಾವನ್ನಪ್ಪಿದ್ದಾರೆ.
ಗಡ್ ಚಿರೋಲಿಯ ಎಟಪಲ್ಲಿ ತಾಲೂಕಿನ ಅಲ್ದಂಡಿ ಟೋಲಾ ಗ್ರಾಮದ 24ವರ್ಷದ ಆಶಾ ಸಂತೋಷ್ ಕಿರಂಗಾ ಮೃತ ಮಹಿಳೆ. ಆಕೆಗೆ 9 ತಿಂಗಳು ತುಂಬಿತ್ತು. ಅಲ್ಡಂಡಿ ಗ್ರಾಮಕ್ಕೆ ಮುಖ್ಯರಸ್ತೆಯಿಂದ ಸಂಪರ್ಕವಿಲ್ಲ. ಆ ಊರಿನಲ್ಲಿ ಹೆರಿಗೆಗೆ ಯಾವುದೇ ಸೌಲಭ್ಯಗಳೂ ಇಲ್ಲ. ಸಹಾಯಕ್ಕಾಗಿ ಆಶಿಸುತ್ತಾ ತುಂಬು ಗರ್ಭಿಣಿ ಆಶಾ ಪತಿಯೊಂದಿಗೆ ತನ್ನ ಸಹೋದರಿ ಮನೆಗೆ ಕಾಡಿನ ಹಾದಿಯಲ್ಲಿ ಸಾಗಿದ್ದಾಳೆ. 6 ಕಿ.ಮೀವರೆಗೆ ನಡೆದುಕೊಂಡು ಹೋಗಿದ್ದು, ದೀರ್ಘ ನಡಿಗೆ ಪರಿಣಾಮ ಆಯಾಸ, ತೀವ್ರವಾದ ಸುಸ್ತಿನಿಂದಾಗಿ ಸಾವನ್ನಪ್ಪಿದ್ದಾರೆ. ಸಹೋದರಿ ಮನೆಗೆ ಬಂದು ತಲುಪಿದ್ದ ಆಶಾ, ತೀವ್ರ ಸುಸ್ತು ಹಾಗೂ ಆಯಾಸ ತಡೆಯಲಗುತ್ತಿಲ್ಲ ಎಂದು ಪರದಾಡುತ್ತಿದ್ದರು. ಹೆರಿಗೆ ನೋವು ತೀವ್ರವಾಗಿತ್ತು. ಆಂಬುಲೆನ್ಸ್ ಮೂಲಕ ಆಶಾಳನ್ನು ಹೆಡ್ರಿಯ ಕಾಳಿ ಅಮ್ಮಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸಿಸೇತ್ರಿಯನ್ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ಕೈಮೀರಿಹೋಗಿತ್ತು. ಮಗು ಗರ್ಭದಲ್ಲೇ ಮೃತಪಟ್ಟಿತ್ತು. ರಕ್ತದೊತ್ತಡ ಹೆಚ್ಚಾಗಿ ಮಹಿಳೆ ಕೂಡ ಕೆಲ ಸಮಯದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

