HomeLatest NewsGood News: ಮೆಟ್ರೋ ಕಾಮಗಾರಿಗೆ ಬಂದ್ ಆಗಿದ್ದ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

Good News: ಮೆಟ್ರೋ ಕಾಮಗಾರಿಗೆ ಬಂದ್ ಆಗಿದ್ದ ರಸ್ತೆ ವಾಹನ ಸಂಚಾರಕ್ಕೆ ಮುಕ್ತ

ಬೆಂಗಳೂರು ನಗರದ ರಸ್ತೆ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್‌ನ್ಯೂಸ್ ನೀಡಿದೆ. ನಮ್ಮ ಮೆಟ್ರೋ ಸಂಬಂಧಿತ ಕಾಮಗಾರಿಗಾಗಿ ಪೂರ್ಣವಾಗಿ ಬಂದ್ ಆಗಿದ್ದ ಕಾಮರಾಜ್ ರಸ್ತೆಯನ್ನು ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ.

ಈ ಕುರಿತು ಬಿಎಂಆರ್‌ಸಿಎಲ್ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಎಂ.ಜಿ.ರಸ್ತೆ ಭೂಗತ ಮೆಟ್ರೋ ನಿಲ್ದಾಣದ ನಿರ್ಮಾಣಕ್ಕಾಗಿ 15ನೇ ಜೂನ್ 2019 ರಂದು ಕಬ್ಬನ್ ರಸ್ತೆ ಮತ್ತು ಎಂ.ಜಿ.ರಸ್ತೆ ನಡುವಿನ ಕಾಮರಾಜ್ ರಸ್ತೆಯನ್ನು, ತಾತ್ಕಾಲಿಕವಾಗಿ ಮುಚ್ಚಲಾಗಿತ್ತು ಎಂದು ಹೇಳಿದೆ.

2026ರಲ್ಲಿ ರಸ್ತೆಯನ್ನು ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಪುನಃ ತೆರೆಯಲಾಗಿದೆ. ರಸ್ತೆಯ ಪಶ್ಚಿಮ ಭಾಗವನ್ನು 14ನೇ ಜೂನ್ 2024 ರಂದು ತೆರೆಯಲಾಗಿದ್ದು, ಪೂರ್ವ ಭಾಗವನ್ನು 2ನೇ ಜನವರಿ 2026 ರಂದು ತೆರೆಯಲಾಗಿದೆ. ಇದರೊಂದಿಗೆ ಈ ಮಾರ್ಗದಲ್ಲಿ ಸಂಪೂರ್ಣ ಸಂಪರ್ಕ ಪುನಃ ಪ್ರಾರಂಭವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುನರ್ ನಿರ್ಮಿತ ರಸ್ತೆಯು 214 ಮೀಟರ್ ಉದ್ದವಿದ್ದು, ಎರಡೂ ವಾಹನ ಸಂಚಾರ ಮಾರ್ಗಗಳು ಕನಿಷ 11ಮೀಟರ್ ಅಗಲ ಹೊಂದಿದೆ. ರಸ್ತೆ ಪುನಃ ವಾಹನ ಸಂಚಾರಕ್ಕೆ ಮುಕ್ತವಾದ ಕಾರಣ ಸಂಚಾರವು ಗಮನಾರ್ಹವಾಗಿ ಸುಗಮವಾಗಲಿದ್ದು, ವಿಶೇಷವಾಗಿ ಕಮರ್ಷಿಯಲ್ ಸ್ಟ್ರೀಟ್ ಮತ್ತು ಬ್ರಿಗೇಡ್ ರಸ್ತೆ ನಡುವಿನ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.

ಈ ನಮ್ಮ ಮೆಟ್ರೋ ಯೋಜನೆ ನಗರ ಮೂಲಸೌಕರ್ಯವನ್ನು ಬಲಪಡಿಸುವ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಏಕೀಕರಣವನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಎಲ್ಲಾ ಸಾರ್ವಜನಿಕರು ಈ ಯೋಜನೆಯ ಅನುಷ್ಠಾನದ ಅವಧಿಯಲ್ಲಿ ತೋರಿದ ಸಹನೆ ಮತ್ತು ಸಹಕಾರಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದು ತಿಳಿಸಿದೆ.

ಯಾವ ಮೆಟ್ರೋ ಮಾರ್ಗ?: ಕಾಮರಾಜ್ ರಸ್ತೆಯ ಮೂಲಕ ನಮ್ಮ ಮೆಟ್ರೋ ಗುಲಾಬಿ ಮಾರ್ಗ ಹಾದು ಹೋಗುತ್ತದೆ. ಆದ್ದರಿಂದ ಸುಮಾರು 6 ವರ್ಷಗಳಿಂದ ರಸ್ತೆಯನ್ನು ಬಂದ್ ಮಾಡಲಾಗಿತ್ತು.

ನಾಗವಾರ-ಕಾಳೇನ ಅಗ್ರಹಾರ ಮೆಟ್ರೋ ಮಾರ್ಗದಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಜಂಕ್ಷನ್ ತನಕ ಇಂಟರ್ ಚೇಂಜ್, ಎಂ.ಜಿ.ರಸ್ತೆ ಸುರಂಗ ಮೆಟ್ರೋ ನಿಲ್ದಾಣ ಕಾಮಗಾರಿಗಾಗಿ 2019ರ ಜೂನ್‌ನಲ್ಲಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಚ್ಚಲಾಗಿತ್ತು.

ಇದರಿಂದಾಗಿ ಬ್ರಿಗೇಡ್‌ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇತರ ಸ್ಥಳಗಳನ್ನು ತಲುಪಲು ವಾಹನ ಸವಾರರು ಸುತ್ತು ಹಾಕಿಕೊಂಡು ಬರಬೇಕಿತ್ತು. ನಮ್ಮ ಮೆಟ್ರೋ ಕಾಮಗಾರಿಗಾಗಿ ಹಾಕಿದ್ದ ಯಂತ್ರ ಮತ್ತು ಸರಕುಗಳನ್ನು ತೆರವುಗೊಳಿಸಲು ಸುಮಾರು 6 ತಿಂಗಳು ತೆಗೆದುಕೊಂಡಿದ್ದು, ಈಗ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ.

ಈ ಕಾಮಗಾರಿಯನ್ನು ಇನ್ನು ಬೇಗನೇ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಜಮೀನು ಹಸ್ತಾಂತರ, ಮರಗಳ ಸ್ಥಳಾಂತರ, ಕೋವಿಡ್ ಕಾರಣಕ್ಕೆ ಕಾಮಗಾರಿ ವಿಳಂಬವಾಯಿತು. 2022ರಲ್ಲಿ ಕಾಮಗಾರಿ ಪುನಃ ವೇಗವನ್ನು ಪಡೆದುಕೊಂಡಿತ್ತು.

ಎಂ.ಜಿ.ರಸ್ತೆಯಲ್ಲಿ ಸುರಂಗ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಇದು ನಮ್ಮ ಮೆಟ್ರೋ 4ನೇ ಇಂಟರ್‌ ಚೇಂಜ್ ನಿಲ್ದಾಣವಾಗಿದೆ. ನೇರಳೆ ಮತ್ತು ಹಸಿರು ಮಾರ್ಗವನ್ನು ಸಂಪರ್ಕಿಸುವ ಇಂಟರ್‌ ಚೇಂಜ್ ನಿಲ್ದಾಣ ಮೆಜೆಸ್ಟಿಕ್‌ನಲ್ಲಿದೆ.

ಆರ್‌.ವಿ.ರಸ್ತೆಯಲ್ಲಿ ಹಸಿರು ಮತ್ತು ಹಳದಿ ಮಾರ್ಗವನ್ನು ಸಂಪರ್ಕಿಸುವ ಇಂಟರ್ ಚೇಂಜ್ ನಿಲ್ದಾಣವಿದೆ. ಹಳದಿ ಮತ್ತು ಗುಲಾಬಿ ಮಾರ್ಗವನ್ನು ಸಂಪರ್ಕಿಸುವ ಇಂಟರ್ ಚೇಂಜ್ ನಿಲ್ದಾಣ ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular