HomeKarnatakaಡಿ.ಕೆ.ಶಿವಕುಮಾರ್ ಕನಸಿನ ಯೋಜನೆಗೆ ಸ್ಥಳ ಅಂತಿಮಗೊಳಿಸಿದ ಬಿಡಿಎ!

ಡಿ.ಕೆ.ಶಿವಕುಮಾರ್ ಕನಸಿನ ಯೋಜನೆಗೆ ಸ್ಥಳ ಅಂತಿಮಗೊಳಿಸಿದ ಬಿಡಿಎ!

ಡಿ.ಕೆ.ಶಿವಕುಮಾರ್. ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರು.  ಬೆಂಗಳೂರು ಸ್ಕೈ-ಡೆಕ್ ಯೋಜನೆ ಡಿ.ಕೆ.ಶಿವಕುಮಾರ್ ಕನಸಿನ ಯೋಜನೆಯಾಗಿದೆ. ಆದರೆ ಈ ಯೋಜನೆಗೆ ಸ್ಥಳ ಅಂತಿಮಗೊಂಡಿರಲಿಲ್ಲ. ಆದರೆ ಈಗ ಬಿಡಿಎ 46 ಎಕರೆ ಪ್ರದೇಶವನ್ನು ಗುರುತಿಸಿದ್ದು, ಇದೇ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ (ಬಿಡಿಎ) ಬೆಂಗಳೂರು ಸ್ಕೈ-ಡೆಕ್ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ. ಈ ಯೋಜನೆಗೆ ಈಗ ಚಲ್ಲಘಟ್ಟ ಬಳಿ 46 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ ಭೂಮಿ ಬಿಡಿಎ ವಶದಲ್ಲಿಯೇ ಇದ್ದು, ಯಾವುದೇ ತೊಂದರೆ ಉಂಟಾಗುವುದಿಲ್ಲ.

ಅಧಿಕಾರಿಗಳ ಮಾಹಿತಿ ಪ್ರಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹೊಂದಿಕೊಂಡಂತೆಯೇ ಬೆಂಗಳೂರು ಸ್ಕೈ-ಡೆಕ್ ಯೋಜನೆ ಜಾರಿಗೊಳಿಸಲಾಗುತ್ತದೆ. ಈಗ ಅಂತಿಮ ಹಂತದಲ್ಲಿರುವ ಮೇಜರ್ ಆರ್ಟೀರಿಯಲ್ ರೋಡ್ (ಎಂಎಆರ್) ಸಹ ಈ ಪ್ರದೇಶದ ಸಮೀಪದಲ್ಲಿಯೇ ಇರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಸ್ಕೈ-ಡೆಕ್ ಯೋಜನೆ ಅಡಿ ನಗರದಲ್ಲಿ ಅತಿ ಎತ್ತರದ ಟವರ್ ನಿರ್ಮಾಣ ಮಾಡಲಾಗುತ್ತದೆ. ಈಗ ಗುರುತಿಸಿರುವ ಜಾಗ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ಸಮೀಪ ಇರುವ ಕಾರಣ ಇದನ್ನು ಅಂತಿಮಗೊಳಿಸಲಾಗಿದೆ. ಚಲ್ಲಘಟ್ಟಕ್ಕೆ ಮೆಟ್ರೋ ಆಗಮಿಸಲು ಪ್ರಾರಂಭವಾದ ಬಳಿಕ ಈ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿದೆ.

ಬೆಂಗಳೂರು ಸ್ಕೈ-ಡೆಕ್‌ಗೆ ಆಗಮಿಸುವ ಜನರಿಗೆ ಅನುಕೂಲವಾಗಲಿ ಎಂದು ಮೆಟ್ರೋ ನಿಲ್ದಾಣದ ಬಳಿಕ ಜಾಗ ಗುರುತಿಸಲಾಗಿದೆ. ಗುರುವಾರ ನಡೆದ ಸಭೆಯಲ್ಲಿ ಈ ಜಾಗದ ಕುರಿತು ಡಿ.ಕೆ.ಶಿವಕುಮಾರ್‌ಗೆ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಚಲ್ಲಘಟ್ಟ ನಮ್ಮ ಮೆಟ್ರೋ ನೇರಳೆ ಮಾರ್ಗದ ಕೊನೆಯ ನಿಲ್ದಾಣವಾಗಿದ್ದು, ಇಲ್ಲಿ ರೈಲುಗಳ ನಿರ್ವಹಣೆ ಮಾಡಲು ಡಿಪೋ ಸಹ ಇದೆ.

ಈ ಹಿಂದೆ 10 ಜಾಗಗಳನ್ನು ಬೆಂಗಳೂರು ಸ್ಕೈ-ಡೆಕ್ ಯೋಜನೆಗೆ ಗುರುತಿಸಲಾಗಿತ್ತು. ಇದರಲ್ಲಿ ನೈಸ್ ರೋಡ್‌ಗೆ ಸೇರಿದ ಜಾಗ ಸಹ ಇತ್ತು. ಬೆಂಗಳೂರು ದಕ್ಷಿಣ ಭಾಗದಲ್ಲಿಯೇ ಯೋಜನೆಯನ್ನು ಕಾರ್ಯಗತಗೊಳಿಸಲು ಬಿಡಿಎ ತೀರ್ಮಾನಿಸಿದೆ. ಆದರೆ ನೈಸ್ ರಸ್ತೆಯ ಪ್ರದೇಶದಲ್ಲಿ ಯೋಜನೆ ಜಾರಿಗೊಳಿಸಲು ನೈಸ್‌ ಸಂಸ್ಥೆ ಆಕ್ಷೇಪಣೆಯನ್ನು ಎತ್ತಿತ್ತು. ಈ ಕುರಿತು ಅಧಿಕಾರಿಗಳಿಗೆ ಡಿ.ಕೆ.ಶಿವಕುಮಾರ್ ಸಹ ಮಾಹಿತಿ ನೀಡಿದ್ದರು. ಆದ್ದರಿಂದ ಹೊಸ ಜಾಗವನ್ನು ಹುಡುಕುವಂತೆ ನಿರ್ದೇಶನ ನೀಡಿದ್ದರು.

“ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ನೈಸ್ ಸಂಸ್ಥೆಯ ಕೆಲವು ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು ಬೆಂಗಳೂರು ಸ್ಕೈ-ಡೆಕ್ ಯೋಜನೆ ಅನುಷ್ಠಾನಗೊಳಿಸಲು ನಾವು ತೀರ್ಮಾನಿಸಿದ್ದೆವು. ಆದರೆ ಅವರು ಆಕ್ಷೇಪಣೆ ಎತ್ತಿದ ಕಾರಣ ಈಗ ಬಿಡಿಎಗೆ ಸೇರಿದ ಜಾಗವನ್ನು ಅಂತಿಮಗೊಳಿಸಿದ್ದೇವೆ” ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಸ್ಕೈ-ಡೆಕ್ ಯೋಜನೆ ಸುಮಾರು 500 ಕೋಟಿ ರೂ. ಮೊತ್ತದ ಯೋಜನೆಯಾಗಿದೆ. ಬೆಂಗಳೂರು ನಗರದ ಭವಿಷ್ಯದ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಯೋಜನೆಯಡಿ ಸುಮಾರು 250 ಮೀಟರ್ ಎತ್ತರದ ಟವರ್ ನಿರ್ಮಾಣ ಮಾಡಲಾಗುತ್ತದೆ.

ಬೆಂಗಳೂರು ಸ್ಕೈ-ಡೆಕ್ ಮೂಲಕ ನಗರವನ್ನು ಸುಂದರವಾಗಿ ನೋಡಬಹುದು. ಇದು ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ಹತ್ತಿರ ಇದ್ದರೆ ಇನ್ನಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಈಗ ಗುರುತಿಸಿರುವ ಜಾಗವೇ ಅಂತಿಮವಾಗುವ ಸಾಧ್ಯತೆ ಇದ್ದು, ಈ ಕುರಿತು ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ.

ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಯ ಹಿನ್ನಲೆಯಲ್ಲಿ ಬೆಂಗಳೂರು ಸ್ಕೈ-ಡೆಕ್ ಎಲ್ಲಿ ನಿರ್ಮಾಣವಾಗಲಿದೆ? ಎಂಬ ಚರ್ಚೆಗಳು ನಡೆಯುತ್ತಿದ್ದವು. ಚಲ್ಲಘಟ್ಟ–ಭೀಮನಕುಪ್ಪೆ ಭಾಗದಲ್ಲಿರುವ ಬಿಡಿಎ ಜಾಗದಲ್ಲಿ ಸ್ಕೈಡೆಕ್ ನಿರ್ಮಿಸಲಾಗುತ್ತದೆ. ಆದ್ದರಿಂದ ವಿಮಾನ ಹಾರಾಟಕ್ಕೆ ತೊಂದರೆಯಾಗುವುದಿಲ್ಲ.

ಡಿ.ಕೆ.ಶಿವಕುಮಾರ್ ಮಾತನಾಡಿ, “ನೈಸ್ ಸಂಸ್ಥೆಗೆ ನೀಡಿದ್ದ ಜಾಗ, ಕೆಐಎಡಿಬಿ ಭೂಮಿ ಪಡೆದು ಬೆಂಗಳೂರು ಸ್ಕೈ-ಡೆಕ್ ಯೋಜನೆ ರೂಪಿಸಿದ್ದೆವು. ಆದರೆ ನೈಸ್ ಸಂಸ್ಥೆ ಆಕ್ಷೇಪಣೆ ಎತ್ತಿದ್ದಾರೆ. ಅವರು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಅವರಿಗೆ ಹೇಗೆ ಪಾಠ ಕಲಿಸಬೇಕು ಎಂದು ಗೊತ್ತಿದೆ” ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular