ಬೆಂಗಳೂರು: ಮರ್ಯಾದೆಗೇಡು ಹತ್ಯೆ ಎಸೆಗುವವರಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸುವ ಮಸೂದೆ ಕರಡು ಸಿದ್ಧಪಡಿಸಲಾಗಿದೆ.
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ಗರ್ಭಿಣಿ ಮಾನ್ಯಾ ಪಾಟೀಲ್ ಅವರನ್ನು ತಂದೆಯೇ ಹತ್ಯೆ ಮಾಡಿದ್ದ ಪ್ರಕರಣ ದೇಶಾದ್ಯಂತ ಗಮನಸೆಳೆದಿದ್ದು, ಇಂತಹ ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ ಗೌರವ ಮತ್ತು ಸಂಪ್ರದಾಯದ ಹೆಸರಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ 2026 ಕರಡು ರೂಪಿಸಿದೆ.
ಕಾನೂನು ಮತ್ತು ಸಂಸದೀಯ ಇಲಾಖೆ ಸಿದ್ದಪಡಿಸಿದ ಈ ಕರಡು, ಜಾತಿಯನ್ನು ಮೀರಿ ಪ್ರೀತಿಸುವವರು, ಮದುವೆಯಾದವರನ್ನು ಮರ್ಯಾದೆ ಹೆಸರಲ್ಲಿ ಹಲ್ಲೆ, ಹತ್ಯೆ ಮಾಡುವ, ಬಹಿಷ್ಕಾರ ಹಾಕುವವರಿಗೆ ಕಡಿವಾಣ ಹಾಕಲು ಮುಂದಾಗಿದೆ.
ಪ್ರೀತಿಸಿ ಮದುವೆಯಾದವರನ್ನು ಮರ್ಯಾದೆಯ ಹೆಸರಲ್ಲಿ ಹಲ್ಲೆ, ಹತ್ಯೆ ಬಹಿಷ್ಕಾರ ಹಾಕುವುದು ನಿಷೇಧಿಸಲಾಗಿದೆ. ಮದುವೆ ತಡೆಯಲು ಪ್ರಚೋದಿಸುವುದು, ದಂಪತಿಯ ಸಾವು, ದೈಹಿಕ ಹಾನಿ, ಗಾಯ ಮಾಡುವುದನ್ನು ನಿಷೇಧಿಸಲಾಗಿದೆ. ದಂಪತಿ ಅಥವಾ ಅವರಲ್ಲಿ ಒಬ್ಬರನ್ನು ನೇರವಾಗಿ ಅಥವಾ ಯಾವುದೇ ವಿಧಾನದ ಮೂಲಕ ಭೇಟಿಯಾಗಲು ಯತ್ನಿಸುವುದು, ಕಿರುಕುಳ ನೀಡುವುದು, ಅಪಹರಿಸುವುದು, ಬೆದರಿಕೆ, ಗೃಹಬಂಧನದಲ್ಲಿ ಇರಿಸುವುದನ್ನು ನಿಷೇಧಿಸಲಾಗಿದೆ.
ದಂಪತಿ ಅಥವಾ ಅವರ ಕುಟುಂಬಕ್ಕೆ ಬಹಿಷ್ಕಾರ, ದಂಡ ವಿಧಿಸುವುದು ನಿಷೇಧ, ದಂಪತಿಯ ತಿಥಿ ಅಥವಾ ಅಂತ್ಯ ಸಂಸ್ಕಾರಕ್ಕೆ ಸಮಾನವಾದ ಆಚರಣೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ, ಆಸ್ತಿಯಲ್ಲಿನ ಉತ್ತರಾಧಿಕಾರದ ಹಕ್ಕು ನಿರಾಕರಣೆ, ಬ್ಯಾಂಕ್ ಖಾತೆ ಸ್ಥಗಿತ, ಉದ್ಯೋಗಕ್ಕೆ ಸಂಚಕಾರ ತರುವುದು, ಗರ್ಭಪಾತ ಮಾಡಿಸುವುದು, ಗರ್ಭಪಾತಕ್ಕೆ ಬಲವಂತ ಮಾಡುವುದು ಕೂಡ ನಿಷೇಧವಿದೆ.

