HomeLive Newsಮೀಸಲಾತಿ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯ ಮಾತ್ರವೇ ಮಾನದಂಡ, ಪತಿ ಆದಾಯ ಪರಿಗಣಿಸಲಾಗದು: ಹೈಕೋರ್ಟ್ ಮಹತ್ವದ...

ಮೀಸಲಾತಿ ಕೆನೆಪದರ ನಿರ್ಧಾರಕ್ಕೆ ಪೋಷಕರ ಆದಾಯ ಮಾತ್ರವೇ ಮಾನದಂಡ, ಪತಿ ಆದಾಯ ಪರಿಗಣಿಸಲಾಗದು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಹಿಂದುಳಿದ ವರ್ಗಗಳ ಮತ್ತು ಕೆನೆಪದರ ನಿರ್ಧರಿಸಲು ವಿವಾಹಿತ ಮಹಿಳಾ ಅಭ್ಯರ್ಥಿಗಳ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ ಪರಿಗಣಿಸುವ ಸಂದರ್ಭದಲ್ಲಿ ಮಹಿಳೆಯ ಪೋಷಕರ ಆದಾಯವನ್ನೇ ಮಾನದಂಡವಾಗಿ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ವಿವಾಹಿತೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಆಕೆಯ ಜನ್ಮದತ್ತ ಆರ್ಥಿಕ ಸಾಮಾಜಿಕ ಹಿನ್ನೆಲೆಯಿಂದ ನಿರ್ಧರಿಸಬೇಕೆ ಹೊರತು ಮದುವೆಯ ನಂತರದ ಆರ್ಥಿಕ ಸ್ಥಿತಿಯಿಂದ ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರಿನ ಕಾಟಂನಲ್ಲೂರು ಗ್ರಾಮದ ಹೆಚ್.ಜೆ. ಶ್ರೇಯಾ ಎಂಬುವರು ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಮೀಸಲಾತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠದಿಂದ ಈ ಮಹತ್ವದ ಆದೇಶ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದಾಯ ದೃಢೀಕರಿಸುವಾಗ ಪೋಷಕರ ಪಿಂಚಣಿಯನ್ನು ಪರಿಗಣಿಸಬಾರದು ಎಂದು ಏಕ ಸದಸ್ಯ ನ್ಯಾಯಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದೇ ರೀತಿ ತನ್ನ ಪೋಷಕರ ಆದಾಯದ ಬದಲಾಗಿ ಪತಿಯ ಆದಾಯ ದಾಖಲೆಗಳನ್ನು ಪರಿಗಣಿಸುವಂತೆ ಮಹಿಳೆಯು ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮಹಿಳೆಯ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ ಕೆನೆಪದರ ನೀತಿಯು ಪೋಷಕರ ಸ್ಥಿತಿಗತಿಯ ಮೇಲೆ ಅವಲಂಬಿತವಾಗಿದೆಯೇ ಹೊರತು ಪತಿ ಆದಾಯದ ಮೇಲಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಪ್ರಕರಣದಲ್ಲಿ ಪೋಷಕರ ಆದಾಯ ಸರ್ಕಾರದ ಆದೇಶದಂತೆ 8 ಲಕ್ಷ ಒಳಗಿದ್ದರೆ ಹಿಂದುಳಿದ ವರ್ಗಗಳ ಪ್ರವರ್ಗ 2 ಎ ನಲ್ಲಿ ಅರ್ಜಿದಾರರು ಮೀಸಲಾತಿಗೆ ಅರ್ಹರಾಗಿದ್ದಾರೆ ತೀರ್ಪಿನ ಎರಡು ವಾರದೊಳಗೆ ಅರ್ಜಿದಾರರ ಪೋಷಕರು ಕೆನೆ ಪದರದ ಒಳಗಿದ್ದಾರೆ ಎನ್ನುವ ದಾಖಲೆ ಸಲ್ಲಿಸಿದಲ್ಲಿ ಜಾತಿ ಮತ್ತು ಆದಾಯ ಪರಿಶೀಲನ ಸಮಿತಿ ಅರ್ಜಿಯನ್ನು ಮರುಪರಿಶೀಲಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರು ಹಿಂದುಳಿದ ವರ್ಗಕ್ಕೆ ಸೇರಿದ್ದರೂ ಅವರ ಪೋಷಕರ ಆದಾಯ ಕೆನೆ ಪದರ ಮಿತಿಮೀರುತ್ತದೆ ಎನ್ನುವ ಕಾರಣಕ್ಕೆ ನೇಮಕಾತಿಯಲ್ಲಿ ಮೀಸಲಾತಿ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. 2023ರ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿದಾರರು ಆಯ್ಕೆಯಾಗಿದ್ದರು. ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಪೋಷಕರ ಆದಾಯ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚನೆ ನೀಡಿತ್ತು. ಆದರೆ ಅವರು ತಮ್ಮ ಪತಿಯ ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದರು. ದಾಖಲೆ ಸಲ್ಲಿಸದ ಕಾರಣ ಅವರ ಮೀಸಲಾತಿ ತಿರಸ್ಕರಿಸಲಾಗಿತ್ತು. ಇದರ ವಿರುದ್ಧ ಅವರು ಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರ ತಾಯಿ ಜಿಲ್ಲಾ ನ್ಯಾಯಾಧೀಶರಾಗಿ, ತಂದೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular