ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಪೊಲೀಸರು, ಜಿಲ್ಲಾಡಳಿತ ಕೈಗೊಂಡಿದೆ. ಪ್ರವಾಸಿಗರಿಗೆ ಸಹ ಹಲವು ಸೂಚನೆಗಳನ್ನು ನೀಡಲಾಗಿದೆ.
ಹೊಸ ವರ್ಷಾಚರಣೆಯ ಸಂಬಂಧ ಮಂಡ್ಯ ಜಿಲ್ಲಾ ಪೊಲೀಸರು ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಪ್ರವೇಶ ನಿರ್ಬಂಧಿಸಿ ಆದೇಶವನ್ನು ಹೊರಡಿಸಿದ್ದಾರೆ. ಡಿಸೆಂಬರ್ 31ರ ಬೆಳಗ್ಗೆ 6 ಗಂಟೆಯಿಂದ ಜನವರಿ 1 ರಾತ್ರಿ 8 ಗಂಟೆಯ ತನಕ ಈ ಆದೇಶ ಜಾರಿಯಲ್ಲಿರುತ್ತದೆ.
ಮಂಡ್ಯ ಜಿಲ್ಲೆಯ ಕಡೆ ಹೋಗಿ ಹೊಸ ವರ್ಷಾಚರಣೆ ಮಾಡುವವರಿದ್ದರೆ ಈ ಕುರಿತು ನೀವು ಮಾಹಿತಿ ತಿಳಿದು ಪ್ರವಾಸ ಮಾಡುವುದು ಉತ್ತಮ. ಕೆ.ಆರ್.ಎಸ್. ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಹೊಸ ವರ್ಷದ ಪ್ರಯುಕ್ತ ಬಲಮುರಿ, ಎಡಮುರಿ ವೇಣುಗೋಪಾಲಸ್ವಾಮಿ ದೇವಾಲಯ, ಚಿಕ್ಕಯಾರಹಳ್ಳಿ ಬಳಿಯ ಕೊಳಬಾವಿ ಪ್ರವೇಶ, ಕೆ.ಆರ್.ಸಾಗರ ಅಣೆಕಟ್ಟು, ಕಾವೇರಿ ಹಿನ್ನೀರು ಮತ್ತು ನದಿ ಪಾತ್ರದ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವೇಶವಿಲ್ಲ.
ಡಿಸೆಂಬರ್ 31ರ ಬೆಳಗ್ಗೆ 6 ಗಂಟೆಯಿಂದ 2026ರ ಜನವರಿ 1ರ ರಾತ್ರಿ 8 ಗಂಟೆಯ ತನಕ ವರ್ಷಾಚರಣೆ ಮತ್ತು ಮೋಜು ಮಸ್ತಿ ಮಾಡದಂತೆ ಬಿ.ಎನ್.ಎಸ್.ಎಸ್ ಕಲಂ 163ರ ಅನ್ವಯ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಕುರಿತು ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಹಶೀಲ್ದಾರ್ ಆದೇಶವನ್ನು ಹೊರಡಿಸಿದ್ದಾರೆ. ಸಾರ್ವಜನಿಕರು ಸಹಕಾರ ನೀಡಬೇಕು, ಕಾನೂನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಸಿದ್ದರಾಮಯ್ಯ ಸೂಚನೆಗಳು; ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕಾನೂನು ಸುವ್ಯವಸ್ಥೆ ಕ್ರಮಗಳ ಕುರಿತಂತೆ ಗೃಹಕಚೇರಿ ಕೃಷ್ಣಾದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದರು.
ಪೊಲೀಸ್ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವ ಭದ್ರತಾ ಕ್ರಮಗಳು ಮತ್ತು ಸೂಕ್ತ ಬಂದೋಬಸ್ತ್ ವ್ಯವಸ್ಥೆ, ಮಹಿಳಾ ಸುರಕ್ಷತೆಗೆ ಮುನ್ನೆಚ್ಚರಿಕೆ ವಹಿಸುವುದು, ಜನದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮತ್ತು ಸುಗಮ ಸಂಚಾರಕ್ಕೆ ಕ್ರಮಗಳು, ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ ಪೊಲೀಸರು ತ್ವರಿತಗತಿಯಲ್ಲಿ ಸ್ಪಂದಿಸುವುದು ಸೇರಿದಂತೆ ವಿವಿಧ ಪೂರ್ವಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ.
ನಾಗರಿಕರಿಗೆ ತೊಂದರೆ ಉಂಟು ಮಾಡುವ ಕಿಡಿಗೇಡಿಗಳ ಮೇಲೆ ನಿರಂತರ ನಿಗಾ ವಹಿಸಬೇಕು. ವ್ಹೀಲಿಂಗ್ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮತ್ತು ನಾಗರಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಸೂಚನೆಗಳನ್ನು ಸಿದ್ದರಾಮಯ್ಯ ನೀಡಿದ್ದಾರೆ.
ಕಿಡಿಗೇಡಿಗಳ ಮೇಲೆ ನಿರಂತರ ನಿಗಾ ಇರಿಸಬೇಕು. ವ್ಹೀಲಿಂಗ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಾದಕ ದ್ರವ್ಯ ಚಟುವಟಿಕೆಗಳ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಹೊಸ ವರ್ಷವನ್ನು ಸಂಭ್ರಮದ ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬರಮಾಡಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.

