ಬೆಂಗಳೂರು: ಪ್ರತಿದಿನ ಕುಡಿದು ಬಂದು ವಿನಾಕಾರಣ ಜಗಳವಾಡುತ್ತಿದ್ದ ಪತಿಯನ್ನು ಚಾಕುವಿನಿಂದ ಇರಿದು ಪತ್ನಿಯೇ ಕೊಲೆ ಮಾಡಿದ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಸ್ಸಾಂ ಮೂಲದ ರಾಜೀವ್ ರಜಪೂತ್(28) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಎಂಟು ವರ್ಷದ ಹಿಂದೆ ರುಬಿನಾ ಕೌರ್ ಮತ್ತು ರಾಜೀವ್ ರಜಪೂತ್ ಮದುವೆಯಾಗಿದ್ದು, ದಂಪತಿಗೆ ಒಂದು ಮಗುವಿದೆ. ವರ್ತೂರಿನ ಮುನ್ನೆಕೊಳಲು ಶಿರಡಿ ಸಾಯಿಬಾಬಾ ದೇವಾಲಯದ ಬಳಿ ಕುಟುಂಬ ವಾಸವಾಗಿದೆ. ಕೆಲಸಕ್ಕೆ ಹೋಗದೆ ಪ್ರತಿದಿನ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ರಾಜೀವ್ ಪತ್ನಿಯೊಂದಿಗೆ ಜಗಳವಾಡುತ್ತಿದ್ದ.
ಕುಟುಂಬ ನಿರ್ವಹಣೆಗಾಗಿ ತಾನು ಕೆಲಸಕ್ಕೆ ಹೋಗುವುದಾಗಿ ರುಬಿನಾ ಕೇಳಿಕೊಂಡರೂ ರಾಜೀವ್ ಕಳಿಸಿರಲಿಲ್ಲ. ಬುಧವಾರ ರಾತ್ರಿ ಕೂಡ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಗುರುವಾರ ಬೆಳಗ್ಗೆ ಮತ್ತೆ ಜಗಳವಾಗಿದ್ದು, ಆತನ ಕಾಟಕ್ಕೆ ರೋಸಿ ಹೋದ ರುಬಿನಾ ಅಡುಗೆ ಕೋಣೆಯಲ್ಲಿದ್ದ ಚಾಕು ತಂದು ಪತಿಯ ಎದೆ, ಹೊಟ್ಟೆ ಸೇರಿ ದೇಹದ ಇತರೆ ಭಾಗಗಳಿಗೆ ಇರಿದಿದ್ದಾಳೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ರಾಜೀವ್ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ಕೂಗಾಟ ಕೇಳಿದ ಅಕ್ಕಪಕ್ಕದ ನಿವಾಸಿಗಳು ಮನೆ ಬಳಿ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ರಾಜೀವ್ ಬಿದ್ದಿರುವುದು ಕಂಡುಬಂದಿದೆ. ಮಾಹಿತಿ ತಿಳಿದ ವರ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ರಾಜೀ ಮೃತಪಟ್ಟಿರುವುದು ಗೊತ್ತಾಗಿದೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ರುಬಿನಾ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

