ಬೆಂಗಳೂರು: ಹೋಟೆಲ್ ಮ್ಯಾನೇಜರ್ ನಿಂದ 30 ಸಾವಿರ ರೂ. ಲಂಚ ಪಡೆಯುತ್ತಿದ್ದ ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಜಾಜಿನಗರದಲ್ಲಿರುವ ಹೋಟೆಲ್ ಸಾಗರ್ ವ್ಯವಸ್ಥಾಪಕ ಸಂಜಯ್ ಕುಮಾರ್ ಅವರು ತಡರಾತ್ರಿವರೆಗೂ ಹೋಟೆಲ್ ವಹಿವಾಟು ನಡೆಸುವ ಬಗ್ಗೆ ಎಸಿಪಿ ಕೃಷ್ಣಮೂರ್ತಿಗೆ ಮನವಿ ಮಾಡಿದ್ದರು. ಅನುಮತಿ ನೀಡಲು 50 ಸಾವಿರ ರೂ. ಲಂಚ ನೀಡುವಂತೆ ಎಸಿಪಿ ಬೇಡಿಕೆ ಇಟ್ಟಿದ್ದಾರೆ.
ನಂತರ ಎಸಿಪಿ 30 ಸಾವಿರ ರೂ. ಪಡೆಯಲು ಒಪ್ಪಿಕೊಂಡಿದ್ದರು. ಈ ಬಗ್ಗೆ ಹೋಟೆಲ್ ವ್ಯವಸ್ಥಾಪಕ ಸಂಜಯ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬುಧವಾರ ಎಸಿಪಿ ಕೃಷ್ಣಮೂರ್ತಿ ಭೇಟಿ ಮಾಡಿದ ಸಂಜಯ್ ಕುಮಾರ್ 30 ಸಾವಿರ ರೂ. ಲಂಚ ನೀಡಿದ್ದರು. ಇದೇ ವೇಳೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಎಸಿಪಿ ಕೃಷ್ಣಮೂರ್ತಿ ಬಂಧಿಸಿ, ಲಂಚದ ಹಣ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

