ಶಿವಮೊಗ್ಗ: ಶಿವಮೊಗ್ಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 2025ರಲ್ಲಿ ದಾಖಲಾಗಿದ್ದ 270 ಪ್ರಕರಣಗಳನ್ನು ಭೇದಿಸಿದ್ದಾರೆ. ಆರು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ, ಬೈಕ್, ಕಾರ್, ಅಡಕೆ ಜಪ್ತಿ ಮಾಡಲಾಗಿದೆ.
2025ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ, ಪೊಲೀಸ್ ಕವಾಯತು ಮೈದಾನ ಡಿಎಆರ್ ಶಿವಮೊಗ್ಗದಲ್ಲಿ 2025ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ಎಸ್ಪಿ ಮಿಥುನ್ ಕುಮಾರ್ ಹಸ್ತಾಂತರ ಮಾಡಿದ್ದಾರೆ.
2025ನೇ ಸಾಲಿನ 222 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 48 ಪ್ರಕರಣಗಳು ಸೇರಿ ಒಟ್ಟು 270 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು ಮೌಲ್ಯ 6,43,65,477/-ರೂಗಳ ಮಾಲುಗಳನ್ನು ವಶ ಪಡಿಸಿಕೊಂಡಿರುತ್ತದೆ ಮತ್ತು CEIR(Central Equipment Identity Register) ಪೋರ್ಟಲ್ ಮುಖಾಂತರ ಕಳೆದು ಹೋದ ಒಟ್ಟು 3015 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿರುತ್ತದೆ.
2025ನೇ ಸಾಲಿನಲ್ಲಿ ಶಿವಮೊಗ್ಗ ಜಿಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ವರದಿಯಾಗಿರುತ್ತವೆ. ಸದರಿ ಪ್ರಕರಣಗಳಲ್ಲಿ 2 ಲಾಭಕ್ಕಾಗಿ ಕೊಲೆ, 8 ದರೋಡೆ, 17 ಸುಲಿಗೆ, 14 ಸರಗಳ್ಳತನ, 48 ಕನ್ನಕಳವು, 12 ಮನೆಗಳ್ಳತನ, 37 ಸಾಮಾನ್ಯ ಕಳವು, 12 ಜಾನುವಾರು ಕಳವು, 53 ವಾಹನ ಕಳವು ಹಾಗೂ 19 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 270 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಅಂದಾಜು ಮೌಲ್ಯ 6,43,65,477/- ರೂ ಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತದೆ. ಅಲ್ಲದೇ ಹಿಂದಿನ ವರ್ಷಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ 02 ದರೋಡೆ, 17 ಮನೆಗಳ್ಳತನ, 9 ಸಾಮಾನ್ಯ ಕಳವು ಮತ್ತು 1 ವಂಚನೆ ಮತ್ತು 19 ವಾಹನ ಕಳವು ಸೇರಿದಂತೆ ಒಟ್ಟು 48 ಪ್ರಕರಣಗಳನ್ನು ಸಹ ಪತ್ತೆ ಮಾಡಿ ಅಂದಾಜು ಮೌಲ್ಯ 89,43,125/- ರೂಗಳ ಮಾಲುಗಳನ್ನು ವಶಪಡಿಸಿಕೊಂಡಿದ್ದು, ಸದರಿ ಸ್ವತ್ತುಗಳನ್ನು ಹಾಗೂ CEIR ಪೋರ್ಟಲ್ ಮುಖಾಂತರ ಪತ್ತೆ ಹಚ್ಚಲಾದ 1320 ಮೊಬೈಲ್ ಫೋನ್ ಗಳನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.
ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ, ಕಳೆದುಹೋದ ಮಾಲನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸುವಲ್ಲಿ, ಪ್ರಮುಖ ಪಾತ್ರವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಉತ್ತಮ ಕಾರ್ಯವನ್ನು ಎಸ್ಪಿ ಪ್ರಶಂಸಿಸಿ ಅಭಿನಂದಿಸಿದ್ದಾರೆ.

