ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಸೂಚನೆಯಂತೆ ಶಾಸಕ ಪ್ರಸಾದ್ ಅಬ್ಬಯ್ಯ ಅವರ ಸಹೋದರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಕೇಶವ್ ಅಬ್ಬಯ್ಯ ಅವರ ವರ್ಗಾವಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕೇಶವ್ ಅಬ್ಬಯ್ಯ ಅವರನ್ನು ಹುಬ್ಬಳ್ಳಿಯ ಕಿಮ್ಸ್ ದಂತ ವೈದ್ಯಕೀಯ ವಿಭಾಗಕ್ಕೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ವರ್ಗಾವಣೆ ಪ್ರಶ್ನಿಸಿ ಕಿಮ್ಸ್ ಪ್ರಾಧ್ಯಾಪಕ ಡಾ. ಸುನಿಲ್ ಜಿ. ಪಾಟೀಲ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠದಿಂದ ಈ ಕುರಿತಾಗಿ ಸರ್ಕಾರ ಹೊರಡಿಸಿದ್ದ ವರ್ಗಾವಣೆ ಆದೇಶವನ್ನು ರದ್ದು ಪಡಿಸಿದೆ.
ಡಾ. ಕೇಶವ್ ಅಬ್ಬಯ್ಯ ಅವರನ್ನು ಕಾಯಂ ಆಗಿ ಕಿಮ್ಸ್ ನಲ್ಲಿ ನಿಯೋಜನೆಗೊಳಿಸಿರುವುದು ಮತ್ತು ಅರ್ಜಿದಾರರನ್ನು ಅವರ ಅಧೀನದಲ್ಲಿ ಇರುವಂತೆ ನಿಯೋಜಿಸಿರುವುದು ಶಾಸನಬದ್ಧ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪ್ರಕರಣದಲ್ಲಿನ ರಾಜಕೀಯ ಪ್ರಭಾವ ಕಳಂಕಿತ ನಡೆಯಾಗಿದೆ. ಕಿಮ್ಸ್ ಆಸ್ಪತ್ರೆಯು ಡಾ ಕೇಶವ್ ಅವರ ಸಹೋದರ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ನ್ಯಾಯಪೀಠ ಕಿಡಿ ಕಾರಿದೆ.
ಶಾಸನಬದ್ಧವಾಗಿ ಬಡ್ತಿಗೆ ಅರ್ಹರಿದ್ದಾಗ ಮತ್ತು ಇಲಾಖೆಯಲ್ಲಿ ಲಭ್ಯವಿರುವ ಏಕೈಕ ಹುದ್ದೆಗೆ ಹೊರಗಿನವರನ್ನು ನೇಮಕ ಮಾಡಿಕೊಂಡಿರುವುದರಿಂದ ಅರ್ಜಿದಾರರ ಸೇವಾ ಹಿರಿತನ ಶಾಸನಬದ್ಧ ಮತ್ತು ಮೂಲಭೂತ ಹಕ್ಕು ಹಾಗೂ ಬಡ್ತಿಯ ಕಾನೂನುಬದ್ಧ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
2025ರ ಮಾರ್ಚ್ 5 ರಂದು ಕಿಮ್ಸ್ ಹೊರಡಿಸಿದ ವರ್ಗಾವಣೆ ಆದೇಶ, 2025ರ ಜನವರಿ 21ರಂದು ಹೊರಡಿಸಿದ ತಾತ್ಕಾಲಿಕ ಹಿರಿತನದ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.

