ಶಿವಮೊಗ್ಗ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನು ಅಣ್ಣನೇ ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಸೊರಬ ಪೊಲೀಸರು ಭೇದಿಸಿದ್ದು, ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ.
ಸೊರಬ ತಾಲೂಕಿನ ಜೆಜೇಡಗೇರಿ ಸಮೀಪದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಆರೋಪಿ ಅಣ್ಣನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಕಾನಕೊಪ್ಪ ಹೊಸೂರು ಗ್ರಾಮದವನಾಗಿದ್ದು, ಈತನ ಪತ್ನಿಯೊಂದಿಗೆ ಅವಿವಾಹಿತನಾಗಿದ್ದ 28 ವರ್ಷದ ತಮ್ಮ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ತಮ್ಮನನ್ನು ಪುಸಲಾಯಿಸಿ ತೋಟಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ತೋಟದಲ್ಲಿ ಹೂತು ಹಾಕಿದ್ದ. ಒಂದೂವರೆ ತಿಂಗಳಾದರೂ ತಮ್ಮ ಮನೆಗೆ ಬಾರದ ಕಾರಣ ಪೋಷಕರು ಸೆ. 8ರಂದು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಅಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೊಬೈಲ್ ಲೊಕೇಶನ್ ಆಧರಿಸಿ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಜೇಡಗೇರಿಯ ತೋಟದಲ್ಲಿ ತಮ್ಮನ ಕೊಲೆ ಮಾಡಿ ಹೂತು ಹಾಕಿರುವುದರ ಬಗ್ಗೆ ಮಾಹಿತಿ ನೀಡಿದ್ದಾನೆ. ಮಂಗಳವಾರ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

