ಗದಗ: ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ರೀಲ್ಸ್ ಹುಚ್ಚಿಗೆ ಲಿಕ್ಕರ್ ಪ್ರಮೋಷನ್ ಮಾಡುವ ರೀತಿಯಲ್ಲಿ ಸಾಲು ಸಾಲು ಎಣ್ಣೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಸರ್ಕಾರಿ ಅಧಿಕಾರಿಯಾಗಿರುವ ಆಹಾರ ಸುರಕ್ಷತಾ ಅಧಿಕಾರಿ ಚೇತನ್.ಎಸ್ ಎಂಬುವವರು ಬಿಯರ್ ಹಾಗೂ ವಿಸ್ಕಿಯೊಂದಿಗೆ ರೀಲ್ಸ್ ಗಳನ್ನು ಮಾಡಿ ಮಧ್ಯಪಾನಕ್ಕೆ ಉತ್ತೇಜನ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಧಿಕಾರಿ ಚೇತನ್, ಬಾಗಲಕೋಟೆ ಮೂಲದ ಕಂಟೆಂಟ್ ಕ್ರಿಯೇಟರ್ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಾಗರಾಜ್ ನಿಲುಗಲ್ ಅವರೊಂದಿಗೆ ಸೇರಿ ಮಧ್ಯಪಾನದ ಹಲವಾರು ವಿಡಿಯೋಗಳನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಹಾರ ಸುರಕ್ಷತಾ ಅಧಿಕಾರಿಯಾಗಿದ್ದುಕೊಂಡು ಚೇತನ್ ಸಿವಿಲ್ ಸರ್ವಿಸ್ ನಿಯಮ ಉಲ್ಲಂಘನೆ ಮಾಡುತ್ತಿರುವುದೂ ಅಲ್ಲದೇ ಮದ್ಯಪಾನಕ್ಕೆ ಉತ್ತೇಜನ ನೀಡುವಂತಹ ರೀಲ್ಸ್ ಗಳನ್ನು ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಅಧಿಕಾರಿ ಚೇತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮದ್ಯಪಾನ ಜಾಹೀರಾತು ನಿಯಮಗಳು ಸರಿಯಾಗಿ ಜಾರಿಯಾಗದಿರುವುದೇ ಇಂತಹ ವಿಡಿಯೋಗಳಿಗೆ ಕಾರಣ ಎಂದು ಕಿಡಿಕಾರಿದ್ದಾರೆ.
