ಶಿವಮೊಗ್ಗ: ಹಣ ಕೊಡಲಿಲ್ಲವೆಂದು ವೃದ್ಧೆ ಥಳಿಸಿ ಕೊಲೆ ಮಾಡಿದ ಯುವಕನಿಗೆ ಶಿವಮೊಗ್ಗದ ಮೂರನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತೀರ್ಥಹಳ್ಳಿ ತಾಲ್ಲೂಕು ಲಿಂಗಾಪುರದ ಕಿರಣ್(27) ಜೀವಾವಧಿ ಶಿಕ್ಷೆಗೆ ಗುರಿಯಾದ ಯುವಕ. 2021ರ ಜನವರಿ 21ರಂದು ತಮ್ಮೂರು ಸಮೀಪದ ಮೂವಳ್ಳಿ ಗ್ರಾಮದಲ್ಲಿ ಒಬ್ಬರೇ ಇದ್ದ ಶಾರದಮ್ಮ(68) ಅವರ ಬಳಿ ಹೋಗಿ ಹಣ ಕೇಳಿದ್ದಾನೆ, ಹಣ ಕೊಡಲು ಅವರು ನಿರಾಕರಿಸಿದ್ದರಿಂದ ಕಬ್ಬಿಣದ ರಾಡ್ ನಿಂದ ತಲೆಯ ಹಿಂಭಾಗಕ್ಕೆ ಹೊಡೆದು ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಶಾರದಮ್ಮ ಅವರ ಕಿವಿಯಲ್ಲಿದ್ದ ಓಲೆ ತೆಗೆದುಕೊಂಡು ಪರಾರಿಯಾಗಿದ್ದ.
ಮಾಳೂರು ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ಯಶವಂತಕುಮಾರ್ ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ಜೀವಾವಧಿ ಸಜೆ ಮತ್ತು ಇಪ್ಪತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಜೆ. ಶಾಂತರಾಜ್ ವಾದ ಮಂಡಿಸಿದ್ದರು.
