ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪ್ರೀತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದೆ.
ಭದ್ರಾವತಿ ನಗರದ ರಂಗಪ್ಪ ಸರ್ಕಲ್ ಸಮೀಪದ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಪೌರಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್(45), ಕಿರಣ್(25) ಮೃತಪಟ್ಟವರು ಎಂದು ಹೇಳಲಾಗಿದೆ.
ಜೈ ಭೀಮ್ ನಗರದ ನಂದೀಶ್ ಮತ್ತು ಸೃಷ್ಟಿ ಪ್ರೀತಿಸುತ್ತಿದ್ದರು. ಎರಡು ದಿನಗಳ ಹಿಂದೆ ಅವರು ಮನೆ ಬಿಟ್ಟು ಹೋಗಿದ್ದು ಶುಕ್ರವಾರ ಸಂಜೆ ಹಳೆ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಪೊಲೀಸರು ಸಂಧಾನದ ಮೂಲಕ ಗೊಂದಲ ಬಗೆಹರಿಸಿಕೊಳ್ಳುವಂತೆ ಸೂಚಿಸಿ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಎರಡು ಮನೆಯವರ ನಡುವೆ ರಾಜಿ ಪಂಚಾಯಿತಿ ಪ್ರಯತ್ನ ನಡೆದಿದೆ. ನಂದೀಶನ ಜೊತೆಗೆ ಹೋಗುವುದಾಗಿ ಸೃಷ್ಟಿ ಹಠ ಹಿಡಿದಿದ್ದು, ಆಕೆಯ ಸಹೋದರ ಸಿಟ್ಟಿಗೆದ್ದು ಜಗಳವಾಡಿದ್ದಾನೆ. ಆತನಿಗೆ ಕೆಲವರು ಬೆಂಬಲವಾಗಿ ನಿಂತರೆ, ಮತ್ತೊಂದು ಕಡೆ ನಂದೀಶನಿಗೂ ಅನೇಕರು ಬೆಂಬಲವಾಗಿ ನಿಂತಿದ್ದಾರೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ಮಾರಕಾಸ್ತ್ರ ಬಳಸಿ ಹೊಡೆದಾಡಿಕೊಂಡಿದ್ದಾರೆ. ಜಗಳ ಬಿಡಿಸಲು ಹೋದ ಪೌರಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್ ಅವರಿಗೆ ಚಾಕುವಿನಿಂದ ಇರಿಯಲಾಗಿದೆ. ಕಿರಣ್ ಕೂಡ ಇರಿತಕ್ಕೆ ಒಳಗಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ್ ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಿವಮೊಗ್ಗದ ಮೆಗನ್ ಆಸ್ಪತ್ರೆಯಲ್ಲಿ ಕಿರಣ್ ಕೊನೆಯುಸಿರೆಳೆದಿದ್ದಾರೆ.
ಭದ್ರಾವತಿ ಹಳೆನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್, ವೆಂಕಟೇಶ್, ಸುರೇಶ್, ಮಂಜುನಾಥ್, ಭರತ್ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ.
