ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋನೋಡಿ ಗ್ರಾಮದ ಹೆಮ್ಮೂರಿನಲ್ಲಿ ಹೆಜ್ಜೇನು ಹುಳಗಳ ದಾಳಿಯಿಂದ ಕಳೆದ ಎರಡು ದಿನದಲ್ಲಿ 14ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.
ಗುರುವಾರ ಬೆಳಿಗ್ಗೆ ತೋಟಕ್ಕೆ ಹೋಗಿದ್ದ ಹೆಚ್.ಎಲ್. ಪರಮೇಶ್ವರ್ ವಾಪಸ್ ಬರುವಾಗ ಏಕಾಏಕಿ 25ಕ್ಕೂ ಹೆಚ್ಚು ಜೇನುಹುಳಗಳು ದಾಳಿ ಮಾಡಿವೆ. ಹೆಜ್ಜೇನು ಕಡಿದು ಪರಮೇಶ್ವರ್ ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗುರುವಾರ ಬೆಳಿಗ್ಗೆ ಪರಮೇಶ್ವರ್ ಅವರು ತೋಟಕ್ಕೆ ಹೋಗಿ ವಾಪಸ್ ಬರುವಾಗ ಹೆಜ್ಜೆನುಗಳು ದಾಳಿ ಮಾಡಿ ಮುಖ, ಕೈ, ತಲೆಗೆ ಕಚ್ಚಿವೆ. ಎನ್.ಆರ್. ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪರಮೇಶ್ವರ್ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಂದು ದಿನದ ಹಿಂದೆ ಬುಧವಾರ ಇದೇ ಸ್ಥಳದಲ್ಲಿ ಗಾರೆ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದ ಇಬ್ಬರ ಮೇಲೆ ಹೆಜ್ಜೆನು ಹುಳುಗಳು ದಾಳಿ ಮಾಡಿವೆ. ಅಸ್ವಸ್ಥರಾದ ಇಬ್ಬರನ್ನು ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿತ್ತು.
ಆ ಸ್ಥಳಕ್ಕೆ ಬಂದಿದ್ದ ಹತ್ತರಿಂದ ಹನ್ನೆರಡು ಗ್ರಾಮಸ್ಥರ ಮೇಲೆಯೂ ಹೆಜ್ಜೇನು ಹುಳಗಳು ದಾಳಿ ಮಾಡಿದ್ದು, ಅವರು ಕೂಡ ಎನ್.ಆರ್. ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಗಳ ನಂತರ ಈ ರಸ್ತೆಯಲ್ಲಿ ಓಡಾಡಲು ಗ್ರಾಮಸ್ಥರು ಭಯ ಪಡುತ್ತಿದ್ದಾರೆ.
