ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಮದ್ಯ ಮಾರಾಟ ಸಂಬಂಧಿಸಿದಂತೆ, ಇಷ್ಟೇ ಪ್ರಮಾಣದ ಮದ್ಯವನ್ನು ನಿಗದಿತ ಅವಧಿಯಲ್ಲಿ ಮಾರಾಟ ಮಾಡಬೇಕು ಎಂಬ ಯಾವುದೇ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಿಲ್ಲ ಎಂದು ರಾಜ್ಯ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಸ್ಪಷ್ಟಪಡಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಪ್ರಶ್ನೋತ್ತರ ಕಲಾಪದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಅವ್ಯಾಹತವಾಗಿ, ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ಇದರಿಂದ ವಯಸ್ಕರು, ಮಕ್ಕಳು ಕೂಡ ಕುಡಿತದ ದಾಸರಾಗುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ನಮ್ಮದು ಮಹಿಳೆಯರ ಪರ ಸರ್ಕಾರ ಎಂದು ಹೇಳುತ್ತೀರಿ, ಆದರೆ ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರೇ ತೊಂದರೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕು. ಹೆಚ್ಚಿನ ಆದಾಯ ಸಂಗ್ರಹಿಸಲು ಇಂತಿಷ್ಟೇ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಬೇಕು ಎಂದು ಗುರಿ ನಿಗದಿ ಮಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ರಾಜ್ಯದಲ್ಲಿ ಮದ್ಯ ಮಾರಾಟ ಸಂಬಂಧಿಸಿದಂತೆ, ಇಷ್ಟೇ ಪ್ರಮಾಣದ ಮದ್ಯವನ್ನು ನಿಗದಿತ ಅವಧಿಯಲ್ಲಿ ಮಾರಾಟ ಮಾಡಬೇಕು ಎಂಬ ಯಾವುದೇ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಿಲ್ಲ. ಆದರೆ ಮದ್ಯ ಮಾರಾಟದಿಂದ ಇಂತಿಷ್ಟು ಪ್ರಮಾಣದ ಆದಾಯ ಲಭ್ಯವಾಗಬಹುದು ಎಂಬ ನಿರೀಕ್ಷೆಯನ್ನು ಮಾತ್ರ ಹೊಂದಲಾಗಿದೆ. ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಇಲಾಖೆಯು ನಿರಂತರವಾಗಿ ದಾಳಿ ನಡೆಸಿ, ಕ್ರಮ ಕೈಗೊಳ್ಳುತ್ತಿದೆ. ಅಲ್ಲದೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ರಸ್ತೆ ಕಾವಲು ನಡೆಸಿ, ಸಂಶಯಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 721 ಅಬಕಾರಿ ದಾಳಿ ನಡೆಸಿ, 491 ಪ್ರಕರಣಗಳನ್ನು ದಾಖಲಿಸಿದ್ದು, 448 ಜನರನ್ನು ದಸ್ತಗಿರಿ ಮಾಡಲಾಗಿದೆ. 641 ಲೀ. ಅಕ್ರಮ ಮದ್ಯ ವಶಪಡಿಸಿಕೊಂಡಿದ್ದು, 16 ವಾಹನಗಳನ್ನು ಜಪ್ತಿ ಮಾಡಿ, 12.69 ಲಕ್ಷ ರೂ. ದಂಡ ವಿಧಿಸಲಾಗಿದೆ. ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಬಕಾರಿ ಸಚಿವ ತಿಮ್ಮಾಪುರ ಭರವಸೆ ನೀಡಿದರು.
