‘ಮೈ ಶುಗರ್’ ಸಕ್ಕರೆ ಕಾರ್ಖಾನೆಗೆ ಹೊಸ ಬಾಯ್ಲಿಂಗ್ ಹೌಸ್: ಸಿಎಂ ಸಿದ್ದರಾಮಯ್ಯ

ಮಂಡ್ಯ: ರೈತರು ತಮ್ಮ ವ್ಯವಸಾಯ ಪದ್ಧತಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಬೇಕು ಹಾಗೂ ಉತ್ಪಾದಿಸಿದ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಇಂದು ಮಂಡ್ಯದ ವಿ.ಸಿ ಫಾರಂ ಆವರಣದಲ್ಲಿ ಆಯೋಜಿಸಿದ್ದ “ಕೃಷಿ ಮೇಳ 2025” – ಸಮಗ್ರ ಕೃಷಿಯಿಂದ ಸುಸ್ಥಿರತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಡ್ಯದಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಸ್ಥಾಪಿಸಲು ನನ್ನ ಮುಂದೆ ಮೊದಲು ಬೇಡಿಕೆ ಇಟ್ಟವರು ಕೃಷಿ ಸಚಿವರು, ಮಂಡ್ಯ ಮೈಸೂರು ಚಾಮರಾಜನಗರ ಕೊಡಗು ಭಾಗದ ರೈತರಿಗಾಗಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಅಗತ್ಯವಿದೆ ಎಂದು ನನಗೂ ಸಹ ತಿಳಿಯಿತು. ನಂತರ ಸದರಿ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಎಲ್ಲಾ ಸಚಿವರ ಒಪ್ಪಿಗೆ ಪಡೆದು ಮಂಡ್ಯದಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು ಎಂದರು.

ಮಂಡ್ಯ ಭಾಗದ 5 ಜಿಲ್ಲೆಗಳ ಪ್ರಮುಖ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಕೃಷಿ ಮೇಳದಲ್ಲಿ ಆಯೋಜಿಸಲಾಗಿದೆ. ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯಗಳು ಅಭಿವೃದ್ಧಿಪಡಿಸಿದ ತಳಿಗಳು ಮತ್ತು ತಂತ್ರಜ್ಞಾನವನ್ನು ತಮ್ಮಲ್ಲೆ ಇಟ್ಟುಕೊಂಡರೆ ಪ್ರಯೋಜನವಿಲ್ಲ, ಅದನ್ನು ರೈತರಿಗೆ ತಲುಪಿಸಬೇಕು. ಆಗ ಮಾತ್ರ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಭಾರತ ಕೃಷಿ ಪ್ರಧಾನ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಕೃಷಿಕರ ಸಂಖ್ಯೆ ಇಳಿಮುಖವಾಗಿದೆ ಎಂದರು.

ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ರಾಜಕೀಯಕ್ಕೆ ಬರುವ ಮೊದಲು ನಾನು ಸಹ ಕೃಷಿಕನಾಗಿದ್ದೆ. ಮೈಸೂರಿನ ರೈತ ಸಂಘದ ಮೊದಲ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಕೃಷಿಯನ್ನು ವೈಜ್ಞಾನಿಕ ವಿಧಾನದಲ್ಲಿ ಮಾಡಿದಾಗ ಕೃಷಿಯಿಂದ ಹೆಚ್ಚಿನ ಲಾಭಗಳಿಸಬಹುದು. ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಕೃಷಿ ಕಾರ್ಯಕ್ಕೆ ಮಾನವ ಸಂಪನ್ಮೂಲ ಕಡಿಮೆ ಇದೆ. ಹಾಗಾಗಿ ರೈತರು ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಕೃಷಿ ಮಾಡಬೇಕು. ಇದರಿಂದ ಸಮಯ ಮತ್ತು ಹಣ ಎರಡು ಉಳಿತಾಯವಾಗುತ್ತದೆ. ಸರ್ಕಾರ ಕೃಷಿ ಯಂತ್ರೋಪಕರಣಗಳು ಸೇರಿದಂತೆ ಅನೇಕ ಸವಲತ್ತುಗಳನ್ನು ನೀಡುತ್ತಾ ಬಂದಿದೆ ಎಂದರು.

ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಅಂತರಾಷ್ಟ್ರೀಯ ಸ್ಯಾಂಡ್ವಿಚ್ ಸ್ನಾತಕೋತರ ಪದವಿಯನ್ನು ತೆರೆಯಲು ಕೃಷಿ ವಿಜ್ಞಾನಿಗಳು ಬೇಡಿಕೆ ಇಟ್ಟಿದ್ದಾರೆ. ಈ ಸ್ನಾತಕೋತರ ಪದವಿಯನ್ನು ತೆರೆಯಲು ಪ್ರಯತ್ನ ಪಡುತ್ತೇನೆ. ಕೃಷಿಯ ಕುರಿತಾಗಿ ನನಗೆ ಅಪಾರವಾದ ಕಾಳಜಿ ಇದೆ. ನಮ್ಮ ದೇಶದ ಜಿಡಿಪಿಗೆ ಕೃಷಿ ವಲಯ ಹೆಚ್ಚು ಶ್ರಮಿಸುತ್ತಿದೆ ಎಂದರು.

ನಮ್ಮ ಸರ್ಕಾರ ರೈತರ ಪರವಾಗಿ ಇರುತ್ತದೆ ರೈತರನ್ನು ಸಬಲೀಕರಣ ಮಾಡುವುದು ನಮ್ಮ ಉದ್ದೇಶ. ರಾಜ್ಯದ ಸರ್ಕಾರಿ ಸ್ವಾಮ್ಯದಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆಯಾದ ಮೈ ಶುಗರ್ ಅನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ 50 ಕೋಟಿ ಹಣವನ್ನು ನೀಡಿದೆ. ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಿದೆ. ಮೈ ಶುಗರ್ ಕಾರ್ಖಾನೆಗೆ ಹೊಸ ಬಾಯ್ಲಿಂಗ್ ಹೌಸ್ ನೀಡಲಾಗುವುದು ಎಂದರು.

ನಮ್ಮ ಸರ್ಕಾರ ರಾಜ್ಯದ ಜನರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಂಡ್ಯ ಜಿಲ್ಲೆಯ ಮಹಿಳೆಯರು ಶಕ್ತಿ ಯೋಜನೆ ಅಡಿ 18 ಕೋಟಿ ಬಾರಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಜಿಲ್ಲೆಯ 4 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ನ್ನು ಉಚಿತವಾಗಿ ನೀಡಲಾಗುತ್ತಿದೆ. ನಮ್ಮ ರಾಜ್ಯದ ಕಬ್ಬು ಹಾಗೂ ಹೊರ ರಾಜ್ಯದ ಕಬ್ಬಿನ ಗುಣಮಟ್ಟದಲ್ಲಿ ವ್ಯತ್ಯಾಸವಿದೆ, ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಇದರ ಕುರಿತಾಗಿ ಸಂಶೋಧನೆಯನ್ನು ನಡೆಸಿ ಕಬ್ಬಿನ ಗುಣಮಟ್ಟ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read