ಬೆಂಗಳೂರು: ತಾನೇ ಕಟ್ಟಿಸುತ್ತಿದ್ದ ಕನಸಿನ ಮನೆಯಲ್ಲಿ ನೇಣು ಬಿಗಿದುಕೊಂಡು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಈ ಘಟನೆ ನಡೆದಿದೆ. ತಾನೇ ಕಟ್ಟಿಸುತ್ತಿದ್ದ ಮನೆಯಲ್ಲಿ ಟೆಕ್ಕಿ ಮುರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುರಳಿ ಅವರು ಉಷಾ ನಂಬಿಯಾರ್ ಎಂಬುವರ ಜಾಗವನ್ನು ಖರೀದಿ ಮಾಡಿಕೊಂಡು ಮನೆ ನಿರ್ಮಿಸುತ್ತಿದ್ದರು. ಆದರೆ, ಕಟ್ಟಡದಲ್ಲಿ ನಿಯಮ ಮೀರಿ ಕೆಲಸ ನಡೆಸಲಾಗಿದೆ ಎಂಬ ಆರೋಪದ ಮೇಲೆ ಉಷಾ ನಂಬಿಯಾರ್ ಅವರು ಜಿಬಿಎಗೆ ದೂರು ನೀಡಿದ್ದು, ಇದರಿಂದ ಜಿಬಿಎ ಅಧಿಕಾರಿಗಳು ನೋಟಿಸ್ ನೀಡಿದ್ದರು.ಇದರಿಂದ ಮುರುಳಿ ಬಹಳ ಮನನೊಂದಿದ್ದರು.
ಅಲ್ಲದೇ ಜಿಬಿಎ ಅಧಿಕಾರಿಗಳೊಂದಿಗೆ ಸೇರಿ ಉಷಾ ನಂಬಿಯಾರ್ 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆಂದು ಮುರಳಿ ತಮ್ಮ ಡೆತ್ ನೋಟ್ನಲ್ಲಿ ಆರೋಪಿಸಿದ್ದಾರೆ. ಹಣ ಕೊಡಬೇಕೆಂದು ಬೆದರಿಕೆ ಹಾಕಿದ ಹಿನ್ನೆಲೆ ಮಾನಸಿಕ ಒತ್ತಡಕ್ಕೆ ಒಳಗಾದ ಮುರಳಿ ನಿರ್ಮಾಣ ಹಂತದ ಮನೆಯ 2ನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಉಷಾ ನಂಬಿಯಾರ್ ಸೇರಿದಂತೆ ಇಬ್ಬರ ವಿರುದ್ದ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
