GOOD NEWS : ‘ರಾಜ್ಯ ಸರ್ಕಾರ’ದಿಂದ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ :  ಮನೆ ಬಾಗಿಲಿಗೆ ಪಡಿತರ ವಿತರಣೆ.!

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಏಕ ಸದಸ್ಯ ಪಡಿತರ ಚೀಟಿದಾರರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಿಸುವ ಕಾರ್ಯಕ್ರಮ ಪ್ರಾರಂಭಿಸಿದೆ.

ಮುಖ್ಯಮಂತ್ರಿಯವರು ಕಳೆದ ಬಜೆಟ್‍ನಲ್ಲಿ, 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಏಕ ಸದಸ್ಯ ಪಡಿತರ ಚೀಟಿದಾರರಿಗೆ “ಅನ್ನ ಸುವಿಧ” ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ವಿತರಿಸುವಂತೆ ಘೋಷಿಸಿರುತ್ತಾರೆ. ಅದರನ್ವಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಚಿತ್ರದುರ್ಗ ಜಿಲ್ಲೆಯಲ್ಲಿ 6,295 ಏಕ ಸದಸ್ಯ (ಒಬ್ಬ ಹಿರಿಯ ನಾಗರಿಕ) ರನ್ನು ಗುರುತಿಸಿ “ಅನ್ನ ಸುವಿಧ” ಯೋಜನೆಯಡಿ ಅವರ ಮನೆಯ ಬಾಗಿಲಿಗೆ ಪಡಿತರ ಧಾನ್ಯ ತಲುಪಿಸುವ ಕಾರ್ಯ ಪ್ರಾರಂಭಿಸಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 75ಕ್ಕಿಂತ ಹೆಚ್ಚಿನ ವಯಸ್ಸಿನ ಏಕ ಸದಸ್ಯ ಹಿರಿಯ ನಾಗರಿಕರ ವಿವರ ಇಂತಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ 123 ನ್ಯಾಯಬೆಲೆ ಅಂಗಡಿಗಳು, 1,514 ಪಡಿತರ ಚೀಟಿಗಳು ಇವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 151 ನ್ಯಾಯಬೆಲೆ ಅಂಗಡಿಗಳು, 1,106 ಪಡಿತರ ಚೀಟಿಗಳು ಇವೆ. ಹಿರಿಯೂರು ತಾಲ್ಲೂಕಿನಲ್ಲಿ 92 ನ್ಯಾಯಬೆಲೆ ಅಂಗಡಿಗಳು, 1,460 ಪಡಿತರ ಚೀಟಿಗಳು ಇವೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 96 ನ್ಯಾಯಬೆಲೆ ಅಂಗಡಿಗಳು, 866 ಪಡಿತರ ಚೀಟಿಗಳು ಇವೆ. ಹೊಸದುರ್ಗ ತಾಲ್ಲೂಕಿನಲ್ಲಿ 110 ನ್ಯಾಯಬೆಲೆ ಅಂಗಡಿಗಳು, 912 ಪಡಿತರ ಚೀಟಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 50 ನ್ಯಾಯಬೆಲೆ ಅಂಗಡಿಗಳು, 437 ಪಡಿತರ ಚೀಟಿಗಳು ಇವೆ.

“ಅನ್ನಸುವಿಧ” ಮಾಡ್ಯುಲ್‍ನಲ್ಲಿ ಇ-ಕೆವೈಸಿಯಾದ ಒಟ್ಟು 6,295 ಏಕ ಸದಸ್ಯ ಪಡಿತರ ಚೀಟಿದಾರರ ಪಟ್ಟಿ ಆಯಾ ನ್ಯಾಯಬೆಲೆ ಅಂಗಡಿ ಲಾಗಿನ್‍ನಲ್ಲಿ ಲಭ್ಯವಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿ ತಿಂಗಳು 01 ರಿಂದ 05 ರೊಳಗಾಗಿ ಪಡಿತರ ಚೀಟಿದಾರರ ಸಮ್ಮತಿಯನ್ನು ಓ.ಟಿ.ಪಿ ಮುಖಾಂತರ ಪಡೆಯಬೇಕು. ನಂತರ ದಿನಾಂಕ 06 ರಿಂದ 15 ರೊಳಗೆ ದಿನಾಂಕವನ್ನು ನಿಗಧಿಪಡಿಸಿ, ನಿಗಧಿಪಡಿಸಿದ ದಿನದಂತೆ ಓ.ಟಿ.ಪಿ ಮತ್ತು ಬಯೋಮೆಟ್ರಿಕ್ ಪಡೆದು, ನ್ಯಾಯಬೆಲೆ ಅಂಗಡಿ ಮಾಲೀಕರು 75ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮನೆಯ ಬಾಗಿಲಿಗೆ ಪಡಿತರವನ್ನು ವಿತರಿಸುತ್ತಾರೆ.

“ಅನ್ನಸುವಿಧ” ಮಾಡ್ಯುಲ್‍ನಲ್ಲಿ ಲಭ್ಯವಿರುವ ಬಯೋಮೆಟ್ರಿಕ್ ಬಾರದೇ ವಿನಾಯಿತಿ ಪಡೆದ ಪಡಿತರ ಚೀಟಿದಾರರಿಗೂ “ಅನ್ನಸುವಿಧ” ಯೋಜನೆಯಡಿ ಪಡಿತರ ವಿತರಿಸುವ ಅವಕಾಶವಿರುತ್ತದೆ.

“ಅನ್ನಸುವಿಧ” ಯೋಜನೆಯಡಿ ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಈ ಕಾರ್ಯಕ್ಕೆ ಪ್ರತಿ ಪಡಿತರ ಚೀಟಿಗೆ ರೂ.50/-ಸೇವಾ ಶುಲ್ಕವನ್ನು ಸರ್ಕಾರ ಪಾವತಿಸಲಿದೆ.

75ಕ್ಕಿಂತ ಹೆಚ್ಚಿನ ವಯಸ್ಸಿನ ಏಕ (ಒಬ್ಬ) ಸದಸ್ಯ ಹಿರಿಯ ನಾಗರಿಕರು ಪಡಿತರವನ್ನು ತಮ್ಮ ಮನೆಯ ಬಾಗಿಲಿಗೆ ಪಡೆದು “ಅನ್ನಸುವಿಧ” ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read