ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮೂರನೇ ಪರೀಕ್ಷೆಗೆ ವಿದಾಯ ಹೇಳಲು ಚಿಂತನೆ ನಡೆದಿದೆ. ಪರೀಕ್ಷೆ -1, ಪರೀಕ್ಷೆ -2ರ ವೇಳಾಪಟ್ಟಿಯನ್ನು ಮಾತ್ರ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣ ಅಂಕಗಳನ್ನು ಶೇಕಡ 35 ರಿಂದ ಶೇಕಡ 33ಕ್ಕೆ ಇಳಿಕೆ ಮಾಡಿದ ಶಿಕ್ಷಣ ಇಲಾಖೆ ಮೂರು ಪರೀಕ್ಷೆಗಳನ್ನು ನಡೆಸುವ ಬದಲು ಎರಡೇ ಪರೀಕ್ಷೆ ಬರೆಯಲು ಅವಕಾಶ ನೀಡಲು ಮುಂದಾಗಿದೆ.
ಈ ಹಿಂದೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಮಧು ಬಂಗಾರಪ್ಪ ಶಿಕ್ಷಣ ಸಚಿವರಾದ ನಂತರ ಎರಡು ಪರೀಕ್ಷೆ ಬದಲಿಗೆ ಮೂರು ಪರೀಕ್ಷೆ ಜಾರಿಗೆ ತರಲಾಗಿತ್ತು. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು ಕಡಿತಗೊಳಿಸಿದ ನಂತರ ಮೂರು ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಮನಗಂಡಿದ್ದು, ಈ ವರ್ಷದಿಂದಲೇ ಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲು ಮುಂದಾಗಿದೆ.
ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಮೂರು ಪರೀಕ್ಷೆ ಪದ್ಧತಿ ಜಾರಿಯಲ್ಲಿದೆ. ಈಗ ಉತ್ತೀರ್ಣ ಅಂಕ ಕಡಿತ ಮಾಡಿದ್ದು, ಮೊದಲೆರಡು ಪರೀಕ್ಷೆಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಪಾಸ್ ಆಗುತ್ತಿದ್ದಾರೆ. ಮೂರನೇ ಪರೀಕ್ಷೆಯ ಅಂಕದಲ್ಲಿ ಅಂತಹ ಸುಧಾರಣೆ ಕಾಣುತ್ತಿಲ್ಲ. ಹೀಗಾಗಿ ಮೂರನೇ ಪರೀಕ್ಷೆ ಕೈಬಿಡಲು ಚಿಂತನೆ ನಡೆದಿದೆ.
ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಎರಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫೆಬ್ರವರಿ 28 ರಿಂದ ಮಾರ್ಚ್ 17ರ ವರೆಗೆ ನಡೆಯಲಿದೆ.
