ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಬ್ರೇಕ್ ಫಾಸ್ಟ್ ಗಾಗಿ ಮನೆಗೆ ಆಹ್ವಾನಿಸಿದ್ದರು. ಹಾಗಾಗಿ ಒಪ್ಪಿ ಬಂದಿದ್ದೆ. ಇಬ್ಬರೂ ಸೇರಿ ಉಪಹಾರ ಸೇವಿಸಿದೆವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊನ್ನೆ ನಮ್ಮ ಮನೆಗೆ ಬ್ರೇಕ್ ಫಾಸ್ಟ್ ಗೆ ಬಂದಾಗ ನನ್ನನ್ನೂ ಮಂಗಳವಾರ ಬ್ರೇಕ್ ಫಾಸ್ಟ್ ಗೆ ಬನ್ನಿ ಎಂದು ಆಹ್ವಾನಿಸಿದ್ದರು. ಹಾಗಾಗಿ ಬಂದಿದ್ದೆ. ಇಬ್ಬರೂ ಸೇರಿ ಬ್ರೇಕ್ ಫಾಸ್ಟ್ ಮಾಡಿದ್ದು, ಪಕ್ಷದ ವಿಚಾರ, ಅಧಿವೇಶನದ ವಿಚಾರ ಎಲ್ಲವನ್ನೂ ಚರ್ಚೆ ನಡೆಸಿದ್ದೇವೆ ಎಂದರು.
ಡಿಸೆಂಬರ್ 8 ರಿಂದ ಚಳಿಗಾಲದ ಅಧಿವೇಶ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ್ದೇವೆ. ರಾಜ್ಯದ ಅಭಿವೃದ್ಧಿ ಕೆಲಸ, ರೈತರ ಸಮಸ್ಯೆ, ಬೆಳೆ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳ ರೈತರ ಬೇಡಿಕೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿದ್ದೇವೆ. ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದರೂ ಎದುರಿಸುತ್ತೇವೆ. ನಮ್ಮ ಸರ್ಕಾರ ಯಾವಾಗಲೂ ರೈತರ ಪರ ಇದೆ ಎಂದು ಹೇಳಿದರು.
ಇನ್ನು ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್ ನಾಯಕರು ಏನು ಹೇಳುತ್ತಾರೆ ಅದರಂತೆ ನಡೆಯುತ್ತೇವೆ. ಅವರ ನಿರ್ಧಾರವೇ ಅಂತಿಮ. ನಾಳೆ ಮಂಗಳೂರಿನಲ್ಲಿ ಕಾರ್ಯಕ್ರಮವಿದೆ. ಅಲ್ಲಿ ಕೆ.ಸಿ.ವೇಣುಗೋಪಾಲ್ ಕೂಡ ಬರುತ್ತಾರೆ. ಸಮಯ ಸಿಕ್ಕರೆ ನಾವು ಹೈಕಮಾಂಡ್ ಭೇಟಿ ಮಾಡುತ್ತೇವೆ ಎಂದು ಹೇಳಿದರು.
