ಬೆಂಗಳೂರು : ಕೆಲಸ ಪಡೆಯಲು ಬೆಂಗಳೂರಿಗೆ ಬಂದು ಯುವಕನೋರ್ವ ಕಳ್ಳನಾದ ಘಟನೆ ಮೈಕ್ರೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರದ ಚಿತ್ತೂರು ಮೂಲದ ಗೋವರ್ಧನ್ ಎಂಬಾತ 4 ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದನು. ಉಳಿದುಕೊಳ್ಳುವುದಕ್ಕೆ ಸ್ನೇಹಿತ ಪಿಜಿಯಲ್ಲಿ ಜಾಗ ನೀಡಿದ್ದ . ಎಲ್ಲೂ ಕೂಡ ಕೆಲಸ ಸಿಗದೇ ಹತಾಶನಾಗಿದ್ದ. ಕೈಯಲ್ಲಿ ಹಣ ಇಲ್ಲದೇ ಇದ್ದರಿಂದ ಬೇಸತ್ತ ಯುವಕ ಕೊನೆಗೆ ಪಿಜಿಗಳಲ್ಲಿ ಲ್ಯಾಪ್ ಟಾಪ್ ಕದಿಯಲು ಆರಂಭಿಸಿದ್ದಾನೆ.
ಬೆಂಗಳೂರಿನ ಹಲವು ಪಿಜಿಗಳನ್ನ ಟಾರ್ಗೆಟ್ ಮಾಡಿಕೊಂಡಿದ್ದ ಈತ ಲ್ಯಾಪ್ ಟಾಪ್ ಕದ್ದು ಪರಾರಿಯಾಗುತ್ತಿದ್ದನು. ನಂತರ ಕದ್ದ ಲ್ಯಾಪ್ ಟಾಪ್ ನ್ನು ಸ್ನೇಹಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನು. ಮೈಕ್ರೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 21 ಲ್ಯಾಪ್ ಟಾಪ್ ವಶಕ್ಕೆ ಪಡೆದಿದ್ದಾರೆ.
