ಬೆಂಗಳೂರು : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಡಿಸೆಂಬರ್ 1ರ ಸೋಮವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಗ್ರಾಮೀಣ ಪ್ರದೇಶದ ಜನರ ಆಸ್ತಿಗಳಿಗೆ ಇ-ಖಾತಾ ವಿತರಿಸುವ ಮೂಲಕ ಅವುಗಳನ್ನು ಸುರಕ್ಷಿತಗೊಳಿಸುವ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದರು.
2023 – 2024ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಸಮಾರಂಭ ಹಾಗೂ ಇ-ಸ್ವತ್ತು ತಂತ್ರಾಂಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿಗಳ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ, ಸೂಕ್ತ ಖಾತಾ ಭದ್ರತೆ ದೊರಕದ ಸ್ವತ್ತುಗಳಿಗೆ ಹೊಸದಾಗಿ ಇ-ಖಾತೆ ನೀಡುವ ಮಹತ್ವಾಕಾಂಕ್ಷಿ ಯೋಜನೆಗೂ ಚಾಲನೆ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಕುಳಿತು ಇ ಸ್ವತ್ತು ತಂತ್ರಾಂಶದ ಮೂಲಕ ತಮ್ಮ ಆಸ್ತಿಯ ಸ್ಥಿತಿಗತಿಗಳನ್ನು ಪರಿಶೀಲಿಸಬಹುದು ಹಾಗೂ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಇ-ಖಾತೆ ಪಡೆಯಬಹುದಾಗಿದೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ‘ಇ-ಸ್ವತ್ತು’ ವಿತರಣೆ ಕಾರ್ಯಕ್ರಮ ಜಾರಿಯಾಗಿದೆ. ಇದರ ಮುಖ್ಯ ಉದ್ದೇಶಗಳು, ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ಖಾತೆಗಳನ್ನು ನೀಡುವ ಮೂಲಕ ಪಾರದರ್ಶಕತೆ ಮತ್ತು ತ್ವರಿತ ವಿಲೇವಾರಿ ಮಾಡುವುದಾಗಿದೆ . ಇ-ಸ್ವತ್ತು 2.0 ತಂತ್ರಾಂಶ ಬಳಸಿ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಮತ್ತು 15 ದಿನಗಳಲ್ಲಿ ಇ-ಖಾತೆ ನೀಡಲು ಗುರಿ ಹೊಂದಲಾಗಿದೆ
ಸ್ಥಳೀಯವಾಗಿ ಸಂಪನ್ಮೂಲಗಳನ್ನು ಸೃಷ್ಟಿಸಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುವುದರ ಜೊತೆಗೆ, ಗ್ರಾಮೀಣರ ಜೀವನಮಟ್ಟ ಸುಧಾರಿಸುವಂತೆ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಪಂಚಾಯತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಧಾನ ಮಾಡಲಾಗುತ್ತಿದೆ.
ಡಿಸಿಎಂ ಡಿಕೆಶಿ ಹೇಳಿದ್ದೇನು..?
ನಿಮ್ಮ ಮನೆ ಬಾಗಿಲಿಗೆ ಇ-ಸ್ವತ್ತು ತಂದುಕೊಡುವ ಕೆಲಸ ಮಾಡುತ್ತಿದ್ದೇವೆ. ಇದು ನಿಮ್ಮೆಲ್ಲರ ಬದುಕಿಗೆ ಹೊಸರೂಪ ನೀಡಿ, ಎಲ್ಲ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ. ನೀವು ಅರ್ಜಿ ಹಾಕಿ 15 ದಿನದ ಒಳಗೆ ಖಾತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಯಾರೂ ಕಚೇರಿ ಅಲೆಯುವುದು ಬೇಡ ಎಂದು ಆನ್ಲೈನ್ ಹಾಗೂ ಬಾಪುಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ. 11 ಬಿ ಮೂಲಕ ತೆರಿಗೆ ಪಾವತಿಸಿ, ಆಸ್ತಿ ದಾಖಲೆ ಸರಿಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉಳುವವನಿಗೆ ಭೂಮಿ, ಬಗರ್ ಹುಕುಂ ಸಾಗುವಳಿ ಜಮೀನು ಸಕ್ರಮ ಮಾಡಿದೆ. ಅರಣ್ಯ ಪ್ರದೇಶದಲ್ಲೂ ವಾಸಿಸುವವರಿಗೆ ಕಾನೂನಿನ ಅಡಿಯಲ್ಲಿ ಸಹಾಯ ಮಾಡಿದೆ. ನಿಮ್ಮ ಭೂಮಿ ಹಾಗೂ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿದೆ. ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳನ್ನು ಇ ಖಾತಾ ಅಭಿಯಾನ ಮಾಡಿದ್ದು, 6 ಲಕ್ಷ ಜನರಿಗೆ ಇ ಖಾತಾ ವಿತರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಕೃಷ್ಣ ಬೈರೇಗೌಡರು ಹಾಗೂ ಪ್ರಿಯಾಂಕ್ ಖರ್ಗೆ ಅವರು ಸೇರಿ 1,11,111 ಜನರಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿರುವ ತಾಂಡಾಗಳನ್ನು ಸಕ್ರಮ ಮಾಡಿ ಹಕ್ಕುಪತ್ರ, ಭೂ ದಾಖಲೆಗಳನ್ನು ವಿತರಿಸಿದ್ದೇವೆ ಎಂದು ವಿವರಿಸಿದರು.

