ಹಾಪುರ: 14 ವರ್ಷದ ಬಾಲಕಿ ಮೇಲೆ ಆಕೆಯ ಸ್ನೇಹಿತೆಯ ತಂದೆ ಹಾಗೂ ಆತನ ಗೆಳೆಯರು ಸಾಮೂಹಿಕ ಅತ್ಯಾಚಾರವೆಸಗಿರುವ ಹೇಯ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ನಡೆದಿದೆ.
ಇಲ್ಲಿನ ಪಿಲ್ಖುವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದಳು. ಈ ವೇಳೆ ಸ್ನೇಹಿತೆಯ ತಂದೆ ನೀಡಿದ್ದ ಜ್ಯೂಸ್ ಸೇವಿಸಿದ್ದಳು. ಜ್ಯೂಸ್ ನಲ್ಲಿ ಮತ್ತುಬರುವ ಔಷಧಿ ಮಿಶ್ರಣ ಮಾಡಿ ಕೊಟ್ಟಿದ್ದು, ಬಳಿಕ ಬಾಲಕಿ ಮೇಲೆ ಆರೋಪಿ ಹಾಗೂ ಆತನ ಇಬ್ಬರು ಗೆಳೆಯರು ಅತ್ಯಾಚಾರವೆಸಗಿದ್ದಾರೆ.
ಕೃತ್ಯದ ಬಗ್ಗೆ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಅತ್ಯಾಚಾರ ನಡೆಸಿ ತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾಳೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ನವೆಂಬರ್ 13ರಿಂದ ನಾಪತ್ತೆಯಾಗಿದ್ದ ಬಾಲಕಿ ನವೆಂಬರ್ 25ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಾಲಕಿ ನಾಪತ್ತೆಯಾದ ಬಗ್ಗೆ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹುಡುಕಾಟ ನಡೆಸಿದಾಗ ಎಲ್ಲಿಯೂ ಬಾಲಕಿ ಸುಳಿವಿರಲಿಲ್ಲ. ನವೆಂಬರ್ 25ರಂದು ಬಾಲಕಿಯೊಬ್ಬಳು ಗಾಂಧಿ ಬಜಾರ್ ನ ಮನೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು.
ಈ ವೇಳೆ ಕುಟುಂಬಕ್ಕೆ ಮಾಹಿತಿ ನೀಡಿದಾಗ ಕುಟುಂಬದವರು ನಾಪತ್ತೆಯಾಗಿದ್ದ ಬಾಲಕಿಯೇ ಆಕೆ ಎಂದು ಗುರುತು ಹಿಡಿದಿದ್ದಾರೆ. ಬಾಲಕಿಗೆ ಚಿಕಿತ್ಸೆ ಬಳಿಕ ಪ್ರಜ್ಞೆ ಬಂದಿದ್ದು, 12 ದಿನಗಳ ಕಾಲ ನಡೆದ ಘಟನೆಗಳ ಬಗ್ಗೆ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ತನ್ನ ಸ್ನೇಹಿತೆ ಮನೆಗೆ ಆಹ್ವಾನಿಸಿದ್ದಕ್ಕೆ ಹೋಗಿದ್ದೆ. ಈ ವೇಳೆ ಕುಡಿಯಲು ಜ್ಯೂಸ್ ಕೊಟ್ಟಿದ್ದರು. ಕುಡಿದ ಬಳಿಕ ಪ್ರಜ್ಞೆ ತಪ್ಪಿದ್ದಾಗಿ ಎಚ್ಚರವಾದಾಗ ಒಂದು ಕೋಣೆಯಲ್ಲಿ ತಾನು ಬಂಧಿಯಾಗಿದ್ದಾಗಿ ಹಾಗೂ ಕೋಣೆಯಲ್ಲಿ ತನ್ನ ಸ್ನೇಹಿತೆಯ ತಂದೆ ಹಾಗೂ ಆತನ ಇಬ್ಬರು ಸ್ನೇಹಿತರು ಇದ್ದರು. ಬೆದರಿಕೆ ಹಾಕಿ ಪದೇ ಪದೇ ಜ್ಯೂಸ್ ಕೊಟ್ಟು ಪ್ರಜ್ಞೆ ತಪ್ಪಿಸುತ್ತಿದ್ದರು. ಹಲ್ಲೆ ನಡೇಸುತ್ತಿದ್ದರು. ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲ ಎಂದು ತಿಳಿಸಿದ್ದಾಳೆ.
ಪ್ರಜ್ಞಾ ಆಶಿಶ್, ಹೇಮಂತ್ ಹಾಗೂ ನರೇಶ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
