ಬೆಂಗಳೂರು : ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡಲು ಪರೀಕ್ಷೆ ನಿಗದಿಗೊಳಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ (1) ರಲ್ಲಿ ಓದಲಾದ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ, ನೇರ ನೇಮಕಾತಿಗೆ ಶೇ. 75 ರಷ್ಟು ಮತ್ತು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಪದೋನ್ನತಿ ಹೊಂದಲು ಶೇ. 25 ರಷ್ಟು ಅವಕಾಶ ಕಲ್ಪಿಸಲಾಗಿರುತ್ತದೆ.
ಮೇಲೆ (2) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ, ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರು ಪ್ರಸ್ತುತ ಬೋಧನಾ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ. 50 ರಷ್ಟು ಅಂಕಗಳನ್ನು ಪಡೆದಿರುವ ಅಥವಾ ಪದವಿ ಹಂತದಲ್ಲಿ ಅಧ್ಯಯನ ಮಾಡಿದ ಯಾವುದಾದರೂ ಐಚ್ಛಿಕ ವಿಷಯದ ಸ್ನಾತಕೋತ್ತರ ಪದವಿಯಲ್ಲಿ ಶೇ. 50 ರಷ್ಟು ಅಂಕಗಳನ್ನು ಪಡೆದಿರುವ ಹಾಗೂ ಕನಿಷ್ಠ 10 ವರ್ಷಗಳ ಸೇವಾವಧಿಯನ್ನು ಪೂರ್ಣಗೊಳಿಸಿರುವ ಸಹ ಶಿಕ್ಷಕರು ಲಭ್ಯವಿಲ್ಲದಿದ್ದಲ್ಲಿ 07 ವರ್ಷಗಳ ಸೇವಾವಧಿ ಪೂರ್ಣಗೊಳಿಸಿರುವ ಸಹ ಶಿಕ್ಷಕರುಗಳು ಬಿ.ಇಡಿ ಪದವಿಯನ್ನು ಹೊಂದಿರತಕ್ಕದು ಹಾಗೂ ಮುಂಬಡ್ತಿ ನೀಡಿರುವ ಹುದ್ದೆಗಳಿಗೆ ಅರ್ಹರಿರುವ ಸಹ ಶಿಕ್ಷಕರುಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅರ್ಹತಾ ಪರೀಕ್ಷೆಯನ್ನು ನಿಗದಿಪಡಿಸಲು ಆದೇಶಿಸಲಾಗಿದೆ.
ಮೇಲೆ (3) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಪ್ರೌಢಾ ಶಾಲಾ ಸಹ ಶಿಕ್ಷಕರ ವೃಂದದಿಂದ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ, ಸದರಿ ಸಹ ಶಿಕ್ಷಕರುಗಳಿಗೆ ಮುಂಬಡ್ತಿ ನೀಡುವ ಮೊದಲಿಗೆ ಅರ್ಹತಾ ಪರೀಕ್ಷೆಯನ್ನು ನಡೆಸಲು ಕೇಂದ್ರೀಯ ದಾಖಲಾತಿ ಘಟಕ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರನ್ನು ಸಕ್ಷಮ ಪ್ರಾಧಿಕಾರವನ್ನಾಗಿ ನಿರ್ದಿಷ್ಟಪಡಿಸಿ ಆದೇಶಿಸಲಾಗಿರುತ್ತದೆ.
ಮೇಲೆ (4) ರಲ್ಲಿ ಓದಲಾದ ನಿರ್ದೇಶಕರ ಏಕ ಕಡತದ ಪ್ರಸ್ತಾವನೆಯಲ್ಲಿ ಪ್ರೌಢಾ ಶಾಲಾ ಸಹ ಶಿಕ್ಷಕರ ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ ಬಡ್ತಿ ನೀಡಲು ನಿಗದಿಪಡಿಸಬಹುದಾದ ಅರ್ಹತಾ ಪರೀಕ್ಷೆಗೆ ವಿಷಯ ಆಧಾರಿತ ಒಂದು ಪ್ರಶ್ನೆ ಪತ್ರಿಕೆಯಲ್ಲಿ ಗರಿಷ್ಠ 100 ಅಂಕಗಳನ್ನು (ವಿವರಣಾತ್ಮಕ ಪ್ರಶ್ನೆಗಳು-Descriptive questions) ನಿಗದಿಪಡಿಸಲು ಹಾಗೂ ಅರ್ಹತೆಗಾಗಿ ವಿಷಯವಾರು ಪತ್ರಿಕೆಯಲ್ಲಿ ಗರಿಷ್ಠ 100 ಅಂಕಗಳಿಗೆ, ಕನಿಷ್ಠ 50 ಅಂಕಗಳು ಪಡೆಯಬೇಕು ಎಂಬ ಕುರಿತು ಸರ್ಕಾರದ ಆದೇಶ ಹೊರಡಿಸಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದಕ್ಕೆ ಬಡ್ತಿ ನೀಡಲು 2014 ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅರ್ಹತಾ ಪರೀಕ್ಷೆಯನ್ನು ನಿಗದಿಪಡಿಸಿರುವಂತೆ, ಸದರಿ ಅರ್ಹತಾ ಪರೀಕ್ಷೆಗೆ ವಿಷಯ ಆಧಾರಿತ (ವಿವರಣಾತ್ಮಕ ಪ್ರಶ್ನೆಗಳು-Descriptive questions) ಒಂದು ಪ್ರಶ್ನೆ ಪತ್ರಿಕೆಯಲ್ಲಿ ಗರಿಷ್ಠ 100 ಅಂಕಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಿರುವಂತೆ ವರ್ಗೀಕರಿಸಿ, ನಿಗದಿಪಡಿಸಿ ಆದೇಶಿಸಿದೆ.


