ಉಡುಪಿ: ಪ್ರಧಾನಿ ನರೇಂದ್ರ ಮೋದಿ ನಾಳೆ ಉಡುಪಿಯ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದು ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ. ಭಗವದ್ಗೀತೆಯ 10 ಶ್ಲೋಕಗಳನ್ನು ಪ್ರಧಾನಿ ಮೋದಿ ಪಠಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಉಡುಪಿಯಿಂದ ನಾರಾಯಣ ಗುರು ಸರ್ಕಲ್ ವರೆಗೆ ಭವ್ಯ ರೋಡ್ ಶೋ ನಡೆಯಲಿದ್ದು, ಅದಕ್ಕಾಗಿ ಪಟ್ಟಣದಲ್ಲಿ ವ್ಯಾಪಕ ಸಿದ್ಧತೆಗಳು ನಡೆಯುತ್ತಿವೆ. ಕೃಷ್ಣಮಠ ಹಾಗೂ ರೋಡ್ ಶೋ ಮಾರ್ಗದಲ್ಲಿ ವಿಶೇಷ ಅಲಂಕಾರ, ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಆದಿ ಉಡುಪಿ ಹೆಲಿಪ್ಯಾಡ್ ನಿಂದ ಕೃಷ್ಣಮಠದವರೆಗೂ ಎರಡು ಹಂತಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ, ಡಿವೈಡರ್ ಗಳ ಮೇಲೆ ಕೇಸರಿ ಪತಾಕೆಗಳನ್ನು ಸಾಲಾಗಿ ಅಲಂಕರಿಸಲಾಗಿದೆ. ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಭದ್ರತಾ ವ್ಯವಸ್ಥೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಮೈಸೂರು, ಬೆಂಗಳೂರು, ಶಿವಮೊಗ್ಗ ಜಿಲ್ಲೆಗಳಿಂದ 3000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
10 ಎಸ್ ಪಿ, 27 ಡಿವೈ ಎಸ್ ಪಿ, 49 ಇನ್ಸ್ ಪೆಕ್ಟರ್, 127 ಎಸ್ ಐ, 232 ಎ ಎಸ್ ಐ, 1608 ಪಿಸಿ, 39 ಡಬ್ಲೂ ಪಿಸಿ, 48 ಬಿಡಿಡಿಎಸ್ ಟೀಂ, ಆರು ಕೆ ಎಸ್ ಆರ್ ಪಿ, ಆರು ಕ್ಯೂ ಆರ್ ಟಿಂ ನಿಯೋಜಿಸಲಾಗಿದೆ. ರೋಡ್ ಶೋ ಉದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಸಲಾಗುತ್ತಿದೆ.
ಭದ್ರತಾ ದೃಷ್ಟಿಯಿಂದ ಇಂದು ಮುಂಜಾನೆಯಿಂದಲೇ ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಉಡುಪಿಯ ಕಲ್ಸಂಕ ಬಳಿಯೇ ಪ್ರವಾಸಿಗರನ್ನು ತಡೆಯಲಾಗುತ್ತಿದೆ. ಅಲ್ಲದೇ ಸುತ್ತಮುತ್ತಲ ಲಾಡ್ಜ್, ಹೋಟೆಲ್ ಗಳಲ್ಲಿಯೂ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
