ಬಾಗಲಕೋಟೆ: ಬಾದಾಮಿ ತಾಲೂಕಿನ ಕಾಕನೂರಿನಲ್ಲಿ ಎಸ್.ಬಿ.ಐ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ.
ಮೊಹಮ್ಮದ್ ಜಾಕೀರ್ ಆಲಿಖಾನ್ ಮತ್ತು ಕಮರುಲ್ಲಾ ಖಾನ್ ಮಾಮು ಎಂಬುವರನ್ನು ಬಾದಾಮಿ ಪೊಲೀಸರು ಬಂಧಿಸಿ 26.30 ಲಕ್ಷ ನಗದು, 198 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.
ಅ. 3ರಂದು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಕನೂರು ಎಸ್.ಬಿ.ಐ. ಬ್ಯಾಂಕ್ ನಲ್ಲಿ ದರೋಡೆ ನಡೆದಿದ್ದು ಗ್ಯಾಸ್ ಕಟರ್ ಬಳಸಿ, ಸಿಸಿಟಿವಿಗೆ ಸ್ಪ್ರೇ ಹೊಡೆದು ಕಳ್ಳತನ ಮಾಡಲಾಗಿತ್ತು. ಬ್ಯಾಂಕ್ ನಲ್ಲಿ ಹಣ, ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದರು.
ಖದೀಮರ ಪತ್ತೆಗೆ ಒಂದು ತಿಂಗಳು ಉತ್ತರ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ನವೆಂಬರ್ 13ರಂದು ರಾತ್ರಿ ಗಸ್ತು ತಿರುಗುತ್ತಿದ್ದಾಗ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅನುಮಾನದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬ್ಯಾಂಕ್ ಕಳ್ಳತನದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇದೇ ವೇಳೆ ಜಿಲ್ಲೆಯ ಮತ್ತೊಂದು ಬ್ಯಾಂಕಿನ ದರೋಡೆ ಕೇಸ್ ಕೂಡ ಬಯಲಾಗಿದೆ. 2019ರಲ್ಲಿ ನಡೆದ ಕುಳಗೇರಿ ಕ್ರಾಸ್ ನಲ್ಲಿರುವ ವೀರಪುಲಕೇಶಿ ಬ್ಯಾಂಕ್ ಕಳ್ಳತನ ಪ್ರಕರಣವೂ ಬೆಳಕಿಗೆ ಬಂದಿದೆ. ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ಬಹಿರಂಗವಾಗಿದ್ದು, ಇಬ್ಬರನ್ನು ಬಂಧಿಸಿದ ಪೊಲೀಸರು ರಾಜ್ಯಕ್ಕೆ ಕರೆದುಕೊಂಡು ಬಂದಿದ್ದಾರೆ.
