ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಕನೂರು ಗ್ರಾಮವೊಂದರ ಡಿ. ದೇವರಾಜ ಅರಸ್ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿ ಹಾಸ್ಟೆಲ್ ಶೌಚಾಲಯದಲ್ಲಿ ಬುಧವಾರ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದ ಹನುಮಗೌಡ ಬತ್ತಿ ಎಂಬ ಯುವಕನನ್ನು ಬಂಧಿಸಲಾಗಿದೆ.
ಬಾಲಕಿಯ ರಕ್ಷಣೆಗೆ ನಿಗಾ ವಹಿಸದ ಹಾಸ್ಟೆಲ್ ಮೇಲ್ವಿಚಾರಕಿ ಶಶಿಕಲಾ, ಅಡುಗೆ ಕೆಲಸಗಾರರಾಗಿದ್ದ ಪಾರ್ವತಿ, ಪ್ರಿಯಾಂಕಾ ಅವರನ್ನು ಅಮಾನತು ಮಾಡಲಾಗಿದೆ. ಆರೋಪಿ ಹನುಮಗೌಡ, ಶಶಿಕಲಾ, ಶಿಕ್ಷಕರಾದ ಪ್ರಭಾಕರ ಭಜಂತ್ರಿ, ಯಂಕಪ್ಪ ಪೂಜಾರಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯಾಧಿಕಾರಿಗಳಾದ ಭರತೇಶ ಹಿರೇಮಠ, ಸಬೀಯಾ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಎಂಟನೇ ತರಗತಿ ಓದುವಾಗಿನಿಂದಲೂ ಬಾಲಕಿಗೆ ಹನುಮಗೌಡ ಪರಿಚಿತನಾಗಿದ್ದ. ಪ್ರೀತಿಸುತಿದ್ದ ಹನುಮಗೌಡ ಮದುವೆಯಾಗುವುದಾಗಿ ಹೇಳಿ ಹಲವು ಬಾರಿ ಲೈಂಗಿಕ ಸಂಪರ್ಕ ಮಾಡಿದ್ದ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ. ಬುಧವಾರ ಬೆಳಗ್ಗೆ ಬಾಲಕಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಶೌಚಾಲಯಕ್ಕೆ ಹೋದಾಗ ಅಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕುಕನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರಿ ದೂರು ನೀಡಿದ್ದಾರೆ.
ವಸತಿ ನಿಲಯಗಳ ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಅಡಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಬಾಲಕಿ ಗರ್ಭಿಣಿಯಾದ ವಿಷಯವನ್ನು ವೈದ್ಯಾಧಿಕಾರಿಗಳು ಪತ್ತೆ ಮಾಡಿಲ್ಲ. ಹೀಗಾಗಿ ಕರ್ತವ್ಯಲೋಪದ ಮೇಲೆ ಇಬ್ಬರು ವೈದ್ಯಾಧಿಕಾರಿಗಳ ವಿರುದ್ಧವೂ ಕೇಸು ದಾಖಲಿಸಲಾಗಿದೆ.
