ಬೆಂಗಳೂರು: ಮುಖ್ಯಮಂತ್ರಿ ಅವರ ಜೊತೆಗೆ ಒಂದೂವರೆ ಗಂಟೆ ಚರ್ಚೆ ನಡೆಸಲಾಗಿದೆ. ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಇದೆ. ಈ ಪೈಕಿ 14 ತಿಂಗಳ ವೇತನ ಬಾಕಿ ನೀಡುತ್ತೇವೆ ಎಂದಿದ್ದಾರೆ ಎಂದು ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ನಂತರ ಸಾರಿಗೆ ನೌಕರರ ಸಂಘಟನೆಗಳ ಮುಖಂಡ ಅನಂತ ಸುಬ್ಬರಾವ್ ಹೇಳಿದ್ದಾರೆ.
2026ರಿಂದ ವೇತನ ಪರಿಷ್ಕರಣೆ ಮಾಡುತ್ತೇವೆ ಎಂದು ಹೇಳಿದರು. ನಾವು 2024 ರಿಂದಲೇ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿದ್ದೇವೆ ಎಂದು ತಿಳಿಸಿದ್ದಾರೆ
ವೇತನ ಹೆಚ್ಚಳ ಮತ್ತು ವೇತನ ಹಿಂಬಾಕಿಗೆ ಒತ್ತಾಯಿಸಿ ಸಾರಿಗೆ ನೌಕರರು ಹೋರಾಟ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನೌಕರರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದರು. ಆದರೆ ಹೈಕೋರ್ಟ್ ನಿರ್ದೇಶನದಂತೆ ಮುಷ್ಕರದಿಂದ ಹಿಂದೆ ಸರಿದಿದ್ದರು. ನಂತರದಲ್ಲಿ ಬೇಡಿಕೆ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳದೆ ಹಿನ್ನೆಲೆಯಲ್ಲಿ ನವೆಂಬರ್ 28ರಂದು ಕೆಎಸ್ಆರ್ಟಿಸಿ ನೌಕರರ ಜಂಟಿ ಸಂಘಟನೆಗಳ ಕ್ರಿಯಾ ಸಮಿತಿ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಆದರೆ ಸಭೆಯಲ್ಲಿ ವೇತನ ಹೆಚ್ಚಳ ಮತ್ತು ವೇತನ ಹಿಂಬಾಕಿ ಬೇಡಿಕೆ ಈಡೇರಿಲ್ಲ ಎನ್ನಲಾಗಿದೆ.
ಸಿಎಂ ಸಿದ್ಧರಾಮಯ್ಯ ಅವರು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೆಎಸ್ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೆ ಸಭೆ ನಡೆಸಿ, ಚರ್ಚಿಸಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾನೂನು ಸಲಹೆಗಾರರಾದ ಪೊನ್ನಣ್ಣ ಮತ್ತು ಸಾರಿಗೆ ನಿಗಮಗಳ ಅಧ್ಯಕ್ಷರು, ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಹಣಕಾಸು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
