ಥಾಣೆ: ಲಿವ್-ಇನ್-ರಿಲೇಷನ್ ಶಿಪ್ ನಲ್ಲಿದ್ದ ಗೆಳತಿಯನ್ನೇ ಕೊಲೆಗೈದ ಪ್ರಿಯಕರ ಆಕೆಯ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ತುಂಬಿ ಬಿಸಾಕಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ದೇಸಾಯಿ ಗ್ರಾಮದ ಸೇತುವೆಯೊಂದರ ಬಳಿ ಸಿಕ್ಕ ಸೂಟ್ ಕೇಸ್ ನಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪ್ರಿಯಾಂಕಾ ವಿಶ್ವಕರ್ಮ (22) ಕೊಲೆಯಾದ ದುರ್ದೈವಿ. ಶವದ ಕೈ ಮಣಿಕಟ್ಟಿನಲ್ಲಿ ಪಿ.ವಿ.ಎಸ್ ಎಂಬ ಹಚ್ಚೆ ಇತ್ತು. ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಸೂಟ್ ಕೇಸ್ ತಂದು ಇಲ್ಲಿ ಬಿಸಾಕಿದ ಆರೋಪಿ ಸುಳಿವು ಪತ್ತೆಯಾಗಿದೆ.
ಆರೋಪಿ ವಿನೋದ್ ವಿಶ್ವಕರ್ಮ ಎಂಬಾತನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಪ್ರಿಯಾಂಕಾಳನ್ನು ತಾನೇ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಕಳೆದ ಐದು ವರ್ಷಗಳಿಂದ ಪ್ರಿಯಾಂಕಾ ಹಾಗೂ ವಿನೋದ್ ಲಿವ್-ಇನ್-ರಿಲೇಷನ್ ಶಿಪ್ ನಲ್ಲಿದ್ದರಂತೆ. ಇತ್ತೀಚೆಗೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ನವೆಂಬರ್ 21ರಂದು ಕೂಡ ಇಬ್ಬರ ನಡುವೆ ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ತಿರುಗಿ ವಿನೋದ್, ಪ್ರಿಯಾಂಕಾಳನ್ನು ಕೊಲೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
