ಬೆಳಗಾವಿ: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಮಂಗಳವಾರ ಕಾರ್ ಅಪಘಾತದಲ್ಲಿ ಮೃತಪಟ್ಟಿದ್ದು, ಇಂದು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಹಾಂತೇಶ್ ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತರು. ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕೆಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ಬೈಪಾಸ್ ಬಳಿ ಗೌನಳ್ಳಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.
ಏಕಾಏಕಿ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA 04, NC 7982 ಸಂಖ್ಯೆಯ ಇನ್ನೋವಾ ಕಾರ್ ಪಲ್ಟಿಯಾಗಿದೆ.
1974ರ ಮಾರ್ಚ್ 27ರಂದು ಜನಿಸಿದ್ದ ಮಹಾಂತೇಶ್ ಬೀಳಗಿ ಅವರು 2012ರ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಅವರು ತಮ್ಮ ಜನಸ್ನೇಹಿ ಕಾರ್ಯಗಳಿಂದ ರಾಜ್ಯದಲ್ಲಿ ಹೆಸರಾಗಿದ್ದರು. ಕಡು ಬಡತನದಲ್ಲಿ ಬೆಳೆದ ಮಹಾಂತೇಶ್ ಬೆಳಗೆ ಉನ್ನತ ಸ್ಥಾನಕ್ಕೇರಿದ್ದರು. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ನವಿಪೇಟೆಯ ಮಹಾಂತೇಶ್ ಬೀಳಗಿ ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದರು. ಸಣ್ಣ ಕೆಲಸಗಳನ್ನು ಮಾಡುತ್ತಾ ಶಿಕ್ಷಣ ಪೂರೈಸಿ ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ನವೆಂಬರ್ 26ರಂದು ಮಂಗಳವಾರ ರಾಮದುರ್ಗದ ತೋಟದಲ್ಲಿ ಅವರ ತಾಯಿ ಸಮಾಧಿ ಪಕ್ಕದಲ್ಲಿಯೇ ಮಹಾಂತೇಶ್ ಬೀಳಗಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದೆ.
