ಬೆಂಗಳೂರು: ಬೆಂಗಳೂರು ಮಾಸಿಕ 15000 ರೂ. ವೇತನಕ್ಕೆ ಆಗ್ರಹಿಸಿ ಡಿಸೆಂಬರ್ 1ರಿಂದ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದಾರೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್) ಹಾಗೂ ಮಧ್ಯಾಹ್ನದ ಬಿಸಿಯೂಟ ಯೋಜನೆ(ಎಂಡಿಎಂ) ಮುಂದುವರೆಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಡಿಸೆಂಬರ್ 1 ರಿಂದ ಬೆಂಗಳೂರು, ತುಮಕೂರು, ಮಂಡ್ಯ, ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವರ ಮನೆಯ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ಸಿಐಟಿಯು ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಎಸ್. ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು. ಬಜೆಟ್ ನಲ್ಲಿ ಹೆಚ್ಚುವರಿ ಅನುದಾನ ನೀಡಬೇಕು. ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಅಂಗನವಾಡಿಗಳಲ್ಲಿ ಸ್ಥಳೀಯ ಆಹಾರ ಪದಾರ್ಥಗಳನ್ನು ನೀಡಬೇಕು. ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕು. ಮುಖ ಚಹರೆ ಗುರುತಿಸುವಿಕೆ ವ್ಯವಸ್ಥೆ ಸ್ಥಗಿತಗೊಳಿಸಬೇಕು. ಚುನಾವಣೆ ಸೇರಿ ಇತರ ಕೆಲಸಗಳಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಹೊರಗಿಡಬೇಕು ಎಂದು ಆಗ್ರಹಿಸಿದ್ದಾರೆ.
ಆನ್ಲೈನ್ ನಲ್ಲಿ ದಾಖಲಾತಿ ಮಾಡಲು ಸ್ಮಾರ್ಟ್ಫೋನ್ ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 15000 ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಸಿಯೂಟ ಮತ್ತು ಆಶಾ ಯೋಜನೆ ಆರಂಭವಾಗಿ ದಶಕಗಳಾಗಿದ್ದು, ಇದುವರೆಗೂ ಯೋಜನೆಗಳನ್ನು ಕಾಯಂ ಮಾಡದೆ 59 ಲಕ್ಷ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆಗಳಿಗೆ ನೀಡಬೇಕಾದ ಅನುದಾನ ಕಡಿತ ಮಾಡಲಾಗುತ್ತಿದೆ. ತನ್ನ ಪಾಲಿಗೆ ಪಾಲಿನ ವಂತಿಗೆಯನ್ನು ಶೇಕಡ 90 ರಿಂದ 60ಕ್ಕೆ ಇಳಿಕೆ ಮಾಡಿದೆ. ಬೆಲೆ ಏರಿಕೆ ಆಧಾರದಲ್ಲಿ ಬಜೆಟ್ ಹೆಚ್ಚಳ ಮಾಡುತ್ತಿಲ್ಲ. ಇದರಿಂದಾಗಿ ಅಂಗನವಾಡಿ ಬಿಸಿಯೂಟದ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ. ಅಂಗನವಾಡಿ ಕೇಂದ್ರಗಳು ಮೂಲ ಸೌಲಭ್ಯಗಳಿಲ್ಲದೆ ಬಳಲುವಂತಾಗಿದೆ. ಮಹಿಳೆಯರು ಕನಿಷ್ಠ ಕೂಲಿಯೂ ಇಲ್ಲದೆ ಗೌರವಧನ, ಸಂಭಾವನೆ, ಪ್ರೋತ್ಸಾಹ ಧನ ಇಲ್ಲದೆ ದುಡಿಯಬೇಕಿದೆ ಎಂದು ಹೇಳಿದ್ದಾರೆ.
