ರಾಜ್ಯದ ರೇಷ್ಮೆ ಬೆಳೆಗಾರರಿಗೆ ಸಿಎಂ ಸಿದ್ಧರಾಮಯ್ಯ ಗುಡ್ ನ್ಯೂಸ್

ಚಿಕ್ಕಬಳ್ಳಾಪುರ: ಇಂದು ಶಿಡ್ಲಘಟದಲ್ಲಿ ಉದ್ಘಾಟನೆಯಾದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯಿಂದಾಗಿ ಇಡೀ ರಾಜ್ಯದ ರೇಷ್ಮೆ ಬೆಳೆಗಾರರಿಗೆ ಅನುಕೂಲ‌ ಆಗಲಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆದ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ, ಹೆಚ್.ಎನ್.ವ್ಯಾಲಿ 3ನೇ ಹಂತದಲ್ಲಿ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಲೋಕಾರ್ಪಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿರುವುದು ನಮ್ಮ ಸರ್ಕಾರದ ಅಭಿವೃದ್ಧಿ ಪರ್ವದ ವೇಗವನ್ನು ತೋರಿಸುತ್ತಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಗ್ಯಾರಂಟಿ ಕಾರ್ಯಕ್ರಮಗಳಿಗೆ ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಹಣ ಇದುವರೆಗೂ ತೆಗೆದಿಟ್ಟಿರುವುದು ಮಾತ್ರವಲ್ಲದೆ, ಇಷ್ಟೇ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನೂ ನಾವು ನಡೆಸುತ್ತಿದ್ದೇವೆ. ಇದಕ್ಕೆ ಇಂದು ಇಲ್ಲಿ ಉದ್ಘಾಟನೆಗೊಂಡ ಅಭಿವೃದ್ಧಿಯೂ ಸೇರಿದೆ ಎಂದರು.

ಸರ್ಕಾರದ ಬಳಿ ಹಣ ಇಲ್ಲ, ಖಜಾನೆ ಖಾಲಿ ಆಗಿದೆ ಎನ್ನುವ ಬಿಜೆಪಿಯ ಸುಳ್ಳು ಆರೋಪಗಳಿಗೆ ನಮ್ಮ‌ ಸರ್ಕಾರ ಅಭಿವೃದ್ಧಿ ಕಾರ್ಯಗಳ ಮೂಲಕವೇ ಉತ್ತರ ಕೊಟ್ಟಿದೆ. ರಾಜ್ಯದ ಪ್ರತೀ ಕುಟುಂಬಗಳಿಗೂ ಪ್ರತೀ ತಿಂಗಳು ಸರ್ಕಾರದ ಹಣ ಮತ್ತು ಕಾರ್ಯಕ್ರಮಗಳು ತಲುಪುತ್ತಿವೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವವರೆಗೂ ಯಾವ ಗ್ಯಾರಂಟಿ ಯೋಜನೆಗಳೂ ನಿಲ್ಲುವುದಿಲ್ಲ. ಜೊತೆಗೆ ಸಣ್ಣ ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಅಭಿವೃದ್ಧಿ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ ಬೇಕು ಎನ್ನುವುದೂ ಸೇರಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಸುಧಾಕರ್ ಮತ್ತು ಕ್ಷೇತ್ರದ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಸಚಿವರ ಮನವಿಯಂತೆ ಎಲ್ಲಾ ಕಾಮಗಾರಿಗಳಿಗೂ ಅನುದಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಬಿಜೆಪಿಗೆ ರಾಜ್ಯದ ಜನ ಅಧಿಕಾರ, ಅವಕಾಶ ಕೊಟ್ಟಾಗ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಒಂದೇ ಒಂದು ಮನೆಯನ್ನೂ ಇಡೀ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ವಿತರಣೆ ಮಾಡಲಿಲ್ಲ. ಈಗ ನಾವು ರಾಜ್ಯದ ಜನರ ಮನೆ ಬಾಗಿಲಿಗೆ ಅಭಿವೃದ್ಧಿ ಕಾರ್ಯಕ್ರಮಗಳನ್ನು, ಕಲ್ಯಾಣ ಕಾರ್ಯಕ್ರಮಗಳನ್ನು ತಲುಪಿಸುತ್ತಿದ್ದೇವೆ. ಇದನ್ನು ಸಹಿಸದ ಬಿಜೆಪಿ ಸುಳ್ಳು ಆರೋಪಗಳ ಮೇಲೆ ಮತ್ತು ರಾಜ್ಯದ ಜನರನ್ನು ವಿಭಜಿಸುವ ಮೂಲಕ ರಾಜಕಾರಣ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ನಾವು ಜನರನ್ನು ಮತ್ತು ಸಮಾಜವನ್ನು ಬೆಸೆಯುವ ಮೂಲಕ ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇವೆ. ಶಿಡ್ಲಘಟ್ಟದ ನೇಕಾರ ಸಮುದಾಯಕ್ಕೂ ಅನುಕೂಲ ಮಾಡಿಕೊಡಲಾಗುವುದು. ನಾವು ನುಡಿದಂತೆ ನಡೆಯುತ್ತಿದ್ದೇವೆ. ಚುನಾವಣೆ ವೇಳೆ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಹೀಗಾಗಿ 2028 ರಲ್ಲೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read