ಬೆಂಗಳೂರು: ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರನ್ನು ಖರೀದಿಸಲು ತಮ್ಮಲ್ಲೇ ಕುದುರೆ ವ್ಯಾಪಾರ ಆರಂಭಿಸಿದ್ದಾರೆ. ಒಬ್ಬೊಬ್ಬ ಶಾಸಕರಿಗೆ 50 ಕೋಟಿ ಆಫರ್ ನೀಡಲಾಗಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದುಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಇಷ್ಟು ದಿನ ಬೇರೆ ಪಕ್ಷದವರನ್ನು ತಮ್ಮ ಪಕ್ಷಕ್ಕೆ ಕರೆತರಲು ಕುದುರೆ ವ್ಯಾಪಾರ ಮಾಡುತ್ತಿದ್ದರು. ಈಗ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದಲ್ಲಿಯೇ ಶಾಸಕರನ್ನು ತಮ್ಮ ಪರವಾಗಿ ಇರಲಿ ಎಂದು ತಮ್ಮಲ್ಲೇ ವ್ಯಾಪಾರ ಆರಂಭಿಸಿದ್ದಾರೆ ಎಂದರು.
ಒಬ್ಬೊಬ್ಬ ಎಂಎಲ್ ಎಗೆ 50 ಕೋಟಿ ಕೋಡುವುದಾಗಿ ಆಮಿಷವೊಡ್ಡಿದ್ದಾರಂತೆ. ಇನ್ನು ಕೆಲ ಶಾಸಕರಿಗೆ 50 ಕೋಟಿ ಜೊತೆ ಒಂದು ಫ್ಲ್ಯಾಟ್, ಒಂದು ಫಾರ್ಚೂನರ್ ಕಾರ್ ಆಫರ್ ಕೊಡಲಾಗಿದೆಯಂತೆ. ಈ ಬಗ್ಗೆ ನಾನು ಇಡಿಗೆ ದೂರು ನೀಡಬೇಕು ಎಂದಿದ್ದೇನೆ ಎಂದಿದ್ದಾರೆ.
ಇನ್ನು ರಣದೀಪ್ ಸುರ್ಜೇವಾಲಾ ಅವರು ಈಗಾಗಲೇ ಡೀಲ್ ಮಾಡಿಕೊಂಡಿದ್ದಾರೆ. ಮಂತ್ರಿ ಸ್ಥಾನಕ್ಕೆ ಶಾಸಕರಿಗೆ 200 ಕೋಟಿಗೆ ಬೇಡಿಕೆ ಇಡಲಾಗಿದೆ. ಈ ಮೊದಲೇ ಶಾಸಕ ವಿರೇಂದ್ರ ಪಪ್ಪಿ ಸುರ್ಜೇವಾಲಾಗೆ 200 ಕೋಟಿ ಪಾವತಿ ಮಾಡಿದ್ದಾರಂತೆ. ಜೈಲಿಗೆ ಸೇರುವ ಮೊದಲೇ ಅವರು ಅಡ್ವಾನ್ಸ್ ಆಗಿ ಹಣ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲು ಸುರ್ಜೇವಾಲಾರನ್ನು ಬಂಧಿಸಿ ತನಿಖೆ ನಡೆಸಬೇಕು. ನಾನು ಇಡಿಗೆ ದೂರು ನೀಡಬೇಕು ಎಂದಿದ್ದೇನೆ ಎಂದು ಹೇಳಿದ್ದಾರೆ.
