ಚಾಮರಾಜನಗರ: ಆಭರಣ ತಯಾರಕರೊಬ್ಬರ ಕಾರು ಅಡ್ಡಗಟ್ಟಿ ನಟೋರಿಯಸ್ ಗ್ಯಾಂಗ್ ವೊಂದು 1.3ಕೆಜಿ ಚಿನ್ನಾಭರಣ ದರೋದೆ ಮಾಡಿರುವ ಘಟನೆ ಚಾಮರಾಜನಗರದ ಬಂಡೀಪುರದಲ್ಲಿ ನಡೆದಿದೆ.
ಆಭರಣ ತಯಾರಕ ವಿನು ಎಂಬುವವರ ಕಾರನ್ನು ಅಡ್ಡಗಟ್ಟಿ ಗ್ಯಾಂಗ್ ವೊಂದು ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದೆ. ಘಟನೆ ನಡೆದು ಎರಡು ದಿನಗಳ ಬಳಿಕ ವಿನು ದೂರು ದಾಖಲಿಸಿದ್ದಾರೆ.
ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಬಳಿ ನವೆಂಬರ್ 20ರಂದು ಈ ಘಟನೆ ನಡೆದಿದೆ. ಕೇರಳದ ನಟೋರಿಯಸ್ ಗ್ಯಾಂಗ್ ನಿಂದ ಈ ಕೃತ್ಯ ನಡೆದಿದೆ ಎಂದು ಶಂಕೆ ವ್ಯಕ್ತವಾಗಿದೆ. ವಿನು ಹಾಗೂ ಸಮೀರ್ ಎಂಬುವವರು ಮಂಡ್ಯದ ರಾಜೇಶ್ ಜ್ಯುವೆಲ್ಲರ್ಸ್ ನಿಂದ ಆಭರಣ ತಯಾರಿಕೆಗಾಗಿ 800 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನ ಖರೀದಿಸಿ ಬಂಡೀಪುರದ ಮೂಲೆಹೊಳೆ ಮೂಲಕ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎರಡು ಇನ್ನೋವಾ, ಒಂದು ಇಟಿಯೋಸ್ ವಾಹನಗಳಲ್ಲಿ ಬಂದ ಗ್ಯಾಂಗ್ ಕಾರನ್ನು ಅಡ್ಡಗಟ್ಟಿ ಚಿನ್ನ ದರೋಡೆ ಮಾಡಿ ಪರಾರಿಯಾಗಿದೆ. ಪಕ್ಕಾ ಪ್ಲಾನ್ ಮಾಡಿ ಕೃತ್ಯವೆಸಗಿರುವ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
