ನವದೆಹಲಿ: ಮೆಡಿಕಲ್ ಶಾಪ್ ಗಳಲ್ಲಿ ಒ.ಆರ್.ಎಸ್. ಹೆಸರಿನಲ್ಲಿ ಮಾರಾಟವಾಗುತ್ತಿರುವ ಹಣ್ಣಿನ ರಸಗಳು ಎನರ್ಜಿ ಡ್ರಿಂಕ್ ಗಳು ಮತ್ತು ಸಿಹಿ ಪೇಯಗಳನ್ನು ಕೂಡಲೇ ತೆರವುಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್.ಎಸ್.ಎಸ್.ಎ.ಐ.) ನಿರ್ದೇಶನ ನೀಡಿದೆ. ಆನ್ಲೈನ್ ಮಾರಾಟ ಮಳಿಗೆಗಳಲ್ಲಿಯೂ ಇವುಗಳನ್ನು ಮಾರಾಟ ಮಾಡದಂತೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ಒ.ಆರ್.ಎಸ್. ಹೆಸರಲ್ಲಿ ರಿಟೇಲ್ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಪೇಯಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ತಿಳಿಸಲಾಗಿದೆ. ಆಹಾರ ಉದ್ಯಮದಲ್ಲಿ ತೊಡಗಿರುವವರು ತಮ್ಮ ಉತ್ಪನ್ನಗಳ ಮೇಲೆ ಎಂದು ಒ.ಆರ್.ಎಸ್. ಎಂದು ನಮೂದಿಸುವುದನ್ನು ನಿಲ್ಲಿಸಬೇಕು ಎಂದು ಈ ಹಿಂದೆ ಎಫ್.ಎಸ್.ಎಸ್.ಎ.ಐ. ಸೂಚನೆ ನೀಡಿದೆ. ಈ ರೀತಿ ನಮೂದಿಸುವುದು ಗ್ರಾಹಕರನ್ನು ತಪ್ಪು ದಾರಿಗೆ ಎಳೆಯುತ್ತದೆ ಎಂದು ಹೇಳಿತ್ತು.
ಅಕ್ಟೋಬರ್ 14 ಮತ್ತು 15 ರಂದು ಒ.ಆರ್.ಎಸ್. ಹೆಸರಿನಲ್ಲಿ ಇಂತಹ ಪೇಯಗಳ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಅವುಗಳ ಮಾರಾಟ ಮುಂದುವರೆದಿದೆ. ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಫ್.ಎಸ್.ಎಸ್.ಎ.ಐ. ಘಟಕಗಳಿಗೆ ಸೂಚನೆ ನೀಡಲಾಗಿದೆ.
