ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರದ ರಾಷ್ಟ್ರೀಯ ಉದ್ಯಾನದ ಮೂಲೆಹೊಳೆ ಚೆಕ್ಪೋಸ್ಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಭರಣ ತಯಾರಕರೊಬ್ಬರ ಕಾರ್ ಅಡ್ಡಗಟ್ಟಿ 1.50 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ ಮಾಡಲಾಗಿದೆ.
ಕೇರಳದ ವಿನು ಅವರು ಮಾರುತಿ ಬ್ರಿಜಾ ಕಾರ್ ನಲ್ಲಿ ಕೇರಳಕ್ಕೆ ಗುಂಡ್ಲುಪೇಟೆ ಮಾರ್ಗದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತೆರಳುವಾಗ ದರೋಡೆಯಾಗಿದೆ. ನವೆಂಬರ್ 20ರಂದು ಮಂಡ್ಯದ ರಾಜೇಶ್ ಜುವೆಲರ್ಸ್ ನಿಂದ ಆಭರಣ ತಯಾರಿಕೆಗಾಗಿ 24 ಕ್ಯಾರಟ್ ನ 800 ಗ್ರಾಂ ಚಿನ್ನ, 22 ಕ್ಯಾರಟ್ ನ 518 ಗ್ರಾಂ ಚಿನ್ನದ ಗಟ್ಟಿಯನ್ನು ಪಡೆದು ತಮ್ಮ ಕಾರ್ ನಲ್ಲಿ ಸಮೀರ್ ಜೊತೆಗೆ ಹೊರಟಿದ್ದಾರೆ.
ರಾತ್ರಿ 7.45ರ ಸುಮಾರಿಗೆ ಮದ್ದೂರು ಚೆಕ್ ಪೋಸ್ಟ್ ನಿಂದ 12 ಕಿಲೋಮೀಟರ್ ದೂರದಷ್ಟು ತೆರಳುತ್ತಿದ್ದಾಗ ಸಿಲ್ವರ್ ಕಲರ್ ಇನೋವಾ ಕಾರ್ ನಲ್ಲಿ ಬಂದ 8-10 ಜನ ದರೋಡೆಕೋರರು ಕಾರ್ ಗೆ ಡಿಕ್ಕಿ ಹೊಡೆದು ನಿಲ್ಲಿಸಿದ್ದಾರೆ. ನಂತರ ಕಾರ್ ಗಾಜು ಒಡೆದು ಚಾಲಕ ಮತ್ತು ವಿನು ಮೇಲೆ ಹಲ್ಲೆ ನಡೆಸಿ 1318 ಗ್ರಾಂ ಚಿನ್ನ ಮತ್ತು ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ್ದಾರೆ ಎಂದು ವಿನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
