ರಾಮನಗರ: ರಾಮನಗರ -ಚನ್ನಪಟ್ಟಣ ನಡುವಿನ ವಂದರಗೂಪ್ಪೆ ಗ್ರಾಮದ ಬಳಿ ರೈಲು ಹಳಿ ಮೇಲೆ ಕಿಡಿಗೇಡಿಗಳು ಕಬ್ಬಿಣದ ರಾಡ್ ಇಟ್ಟಿದ್ದಾರೆ.
ರಾಡ್ ಇದೇ ಮಾರ್ಗವಾಗಿ ಚಲಿಸುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನ ಡೀಸೆಲ್ ಟ್ಯಾಂಕ್ ಗೆ ಬಡಿದ ಪರಿಣಾಮ ಡೀಸೆಲ್ ಲೀಕ್ ಆಗಿ ಇಂಜಿನ್ ತಾಂತ್ರಿಕ ವೈಫಲ್ಯ ಕಂಡುಬಂದಿದ್ದು, ಸುಮಾರು 2 ಗಂಟೆ ಕಾಲ ರೈಲು ನಿಂತಿದೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ರಾಮನಗರ- ಚನ್ನಪಟ್ಟಣ ನಡುವಿನ ವಂದರಗೂಪ್ಪೆ ಗ್ರಾಮದಲ್ಲಿ ಕೆಟ್ಟು ನಿಂತಿದೆ. ನಂತರ ಬೇರೆ ಎಂಜಿನ್ ಸಹಾಯದಿಂದ ರೈಲು ಬೆಂಗಳೂರಿಗೆ ತೆರಳಿದೆ. ಚನ್ನಪಟ್ಟಣ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದು, ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಹೆಚ್ಚಿನ ಅಪಾಯ ತಪ್ಪಿದೆ. ರೈಲಿಗೆ ಅಡ್ಡಲಾಗಿ ಹಳಿಗಳ ಮೇಲೆ ದುಷ್ಕರ್ಮಿಗಳು ಸುಮಾರು 10 ಅಡಿ ಉದ್ದದ ಕಬ್ಬಿಣದ ರಾಡ್ ಇಟ್ಟಿದ್ದರು. ಸುಮಾರು ಅರ್ಧ ಕಿಲೋಮೀಟರ್ ಕಬ್ಬಿಣದ ತುಂಡನ್ನು ಎಳೆದುಕೊಂಡೇ ರೈಲು ಚಲಿಸಿದ್ದು, ಇಂಧನ ಟ್ಯಾಂಕ್ ಗೆ ಹಾನಿಯಾಗಿ ಇಂಧನ ಸೋರಿಕೆಯಾಗಿದೆ. ಲೋಕೋ ಪೈಲಟ್ ರೈಲು ನಿಲ್ಲಿಸಿ ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ. ಏಕಾಏಕಿ ರೈಲು ನಿಂತಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದರು.
