ದಾವಣಗೆರೆ: ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಮತ್ತು ಜೆಡಿಎಸ್ ಮುಖಂಡ ಟಿ. ಅಸ್ಗರ್ ಕೊಲೆ ಯತ್ನ ಪ್ರಕರಣದ ಆರೋಪಿ ತಪ್ಪಿಸಿಕೊಳ್ಳಲು ಆರ್ಥಿಕ ನೆರವು ಮತ್ತು ಆಶ್ರಯ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ ನಾಯ್ಕ ಅವರನ್ನು ದಾವಣಗೆರೆ ಆಜಾದ್ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಚಾಕು ಇರಿತಕ್ಕೆ ಒಳಗಾಗಿದ್ದ ಅಸ್ಗರ್ ಮತ್ತು ಕಾಂಗ್ರೆಸ್ ಮುಖಂಡ ಖಾಲಿದ್ ಪೈಲ್ವಾನ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವಾಗ್ವಾದ ನಡೆಯುತ್ತಿತ್ತು. ನವೆಂಬರ್ 10 ರಂದು ಭಾಷಾ ನಗರದ ಐದನೇ ಕ್ರಾಸ್ ನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಅಸ್ಗರ್ ತೆರಳಿ ವಾಪಸ್ ಬರುವಾಗ ಅಡ್ಡ ಹಾಕಿದ ರೌಡಿಶೀಟರ್ ಖಾಲಿದ್ ಪೈಲ್ವಾನ್ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದ.
ಆಜಾದ್ ನಗರ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆತನಿಗೆ ಆಶ್ರಯ ಮತ್ತು ಆರ್ಥಿಕ ಹಣದ ಸಹಾಯ ಮಾಡಿದ್ದಲ್ಲದೆ ಒಂದು ವಾರದಿಂದ ಗೋವಾ, ದೆಹಲಿ ಸೇರಿ ಹಲವಡೆ ಖಾಲಿದ್ ಮತ್ತು ಸವಿತಾ ಸುತ್ತಾಡಿದ್ದಾರೆ,
ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಸಿಗದ ಕಾರಣ ಸವಿತಾ ಮಲ್ಲೇಶ ನಾಯ್ಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದೀಗ ಕೊಲೆ ಆರೋಪಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
