ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿ ಎರಡು ಕಡೆ ಚಾಕು ಇರಿತ ಪ್ರಕರಣ ನಡೆದಿದೆ. ಪ್ರತ್ಯೇಕ ಪ್ರಕರಣದಲ್ಲಿ ಚಾಕು ಇರಿತದಿಂದ ಇಬ್ಬರು ಗಾಯಗೊಂಡಿದ್ದಾರೆ.
ಬಾರ್ ಗೆ ಕುಡಿಯಲು ಬಂದಿದ್ದ ಸ್ನೇಹಿತರ ನಡುವೆ ಗಲಾಟೆಯಾಗಿದೆ. ಬಾರ್ ಮುಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಮಹೇಶ್ ಎಂಬವನಿಗೆ ಚಾಕುವಿನಿಂದ ಇರಿಯಲಾಗಿದೆ. ಕಸಬಾ ಪೇಟೆ ಠಾಣೆ ವ್ಯಾಪ್ತಿಯ ಗಿರಿಯಾಲ ರಸ್ತೆಯಲ್ಲಿ ಘಟನೆ ನಡೆದಿದೆ. ಮದ್ಯಸೇವನೆಗೆ ಮಹೇಶ್ ನನ್ನು ರಮೇಶ ಮತ್ತು ಸ್ನೇಹಿತರು ಬಾರ್ ಗೆ ಕರೆದಿದ್ದರು. ಕುಡಿದ ನಂತರ ಮಹೇಶ್ ನ ದೇಹದ ಹಲವು ಕಡೆ ಚಾಕುವಿನಿಂದ ಇರಿದು ರಮೇಶ ಮತ್ತು ಆತನ ಸ್ನೇಹಿತರಿಬ್ಬರು ಪರಾರಿಯಾಗಿದ್ದಾರೆ. ಚಾಕು ಇರಿತಕ್ಕೆ ಒಳಗದ ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಮಹೇಶನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಹುಬ್ಬಳ್ಳಿಯ ಶಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ. ಫೈರೋಜ್ ಜಾಪ್ರಿ ಎಂಬುವನಿಗೆ ಅನಿಲ್ ಗೊಲ್ಲರ ಚಾಕುವಿನಿಂದ ಇರಿದಿದ್ದಾನೆ. ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಚಾಕುವಿನಿಂದ ಇರಿದು ಅನಿಲ್ ಪರಾರಿಯಾಗಿದ್ದಾನೆ. ಗಾಯಾಳು ಫೈರೋಜ್ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
