ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಐ ಹಾಜರಾತಿ ಜಾರಿಯಾಗಲಿದೆ. ಹಾಜರಿ ಪುಸ್ತಕದಲ್ಲಿನ ಮಕ್ಕಳ ಹೆಸರನ್ನು ಶಿಕ್ಷಕರು ಕೂಗಿ ಹಾಜರಾತಿ ಹಾಕುವ ಪದ್ಧತಿ ಬದಲಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಒನ್ ಕ್ಲಿಕ್ ಅಟೆಂಡೆನ್ಸ್ ಪದ್ಧತಿ ಜಾರಿಗೆ ಬರಲಿದೆ.
ರಾಜ್ಯದ ಇ-ಗವರ್ನೆನ್ಸ್ ಇಲಾಖೆಯಿಂದ ಎಐ ಅಟೆಂಡೆನ್ಸ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲಾ, ಕಾಲೇಜಿನಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಇದರ ಅಧ್ಯಯನ ಮಾಡಲಾಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಸುಧಾರಣೆ, ಬದಲಾವಣೆ ಮಾಡಿಕೊಂಡು ಹಂತ ಹಂತವಾಗಿ ಬೇರೆ ಶಾಲೆ ಕಾಲೇಜುಗಳಿಗೆ ವಿಸ್ತರಿಸಲಾಗುವುದು.
ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ರಾಜ್ಯ ಸರ್ಕಾರದ ಇ- ಗವರ್ನೆನ್ಸ್ ಇಲಾಖೆ ಈ ಯೋಜನೆಯನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಈಗಾಗಲೇ ಸರ್ಕಾರದ 18 ಇಲಾಖೆಗಳಲ್ಲಿ ಮುಖಚಹರೆ ಸಹಿತ ಮೊಬೈಲ್ ಫೋನ್ ಆಧಾರಿತ ವರ್ಕ್ ಅಟೆಂಡೆನ್ಸ್ ಅನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದ್ದು, ಶಾಲಾ ಕಾಲೇಜುಗಳಲ್ಲಿಯೂ ಎಐ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಇದರಿಂದ ಸಮಯ ಉಳಿತಾಯವಾಗಿ ಬೋಧನೆಗೆ ಹೆಚ್ಚಿನ ಅವಕಾಶ ಸಿಗಲಿದೆ. ಹಾಜರಾತಿಯಲ್ಲಿ ಪಾರದರ್ಶಕತೆ ಇರುತ್ತದೆ. ಇದರಿಂದ ಶಾಲೆಗೆ ಒದಗಿಸುವ ಆಹಾರ, ಅಗತ್ಯ ಸೌಕರ್ಯಗಳ ನಿಖರವಾದ ಲೆಕ್ಕ ಇಡಬಹುದಾಗಿದೆ.
