ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುಲಕಲ್ ಗ್ರಾಮದ ಸಮೀಪ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರಿಸ್ ಹತ್ತಿ ಮಿಲ್ ನಲ್ಲಿ ವಿದ್ಯುತ್ಶಾರ್ಟ್ ಸರ್ಕ್ಯೂಟ್ ನಿಂದ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ದಾಸ್ತಾನು ಮಾಡಲಾಗಿದ್ದ ಭಾರಿ ಪ್ರಮಾಣದ ಹತ್ತಿ ಸುಟ್ಟು ಹೋಗಿದೆ. ಸುಮಾರು 15 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ.
ಸೋಮವಾರ ಸಂಜೆ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ತಗುಲಿ ದಟ್ಟ ಹೊಗೆ ಆವರಿಸಿದ್ದು, ನಂತರ ಹತ್ತಿ ದಾಸ್ತಾನಿಗೆ ತಗುಲಿ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಹತ್ತಿ ಮಿಲ್ ನಲ್ಲಿದ್ದ ಯಂತ್ರೋಪಕರಣಗಳು, ದಾಸ್ತಾನು ಮಾಡಲಾಗಿದ್ದ ಹತ್ತಿ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 15 ಕೋಟಿ ರೂ. ನಷ್ಟು ನಷ್ಟವಾಗಿದೆ.
ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿದ್ದರಿಂದ ತಡರಾತ್ರಿವರೆಗೆ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಲಾಗಿದೆ. ಯಾದಗಿರಿ, ಶಹಾಪುರ, ಜೇವರ್ಗಿ ಅಗ್ನಿಶಾಮಕ ಠಾಣೆಗಳಿಂದ ವಾಹನಗಳನ್ನು ತರಿಸಲಾಗಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು, ಮಿಲ್ ಸಿಬ್ಬಂದಿ, ಸಾರ್ವಜನಿಕರು ಹರಸಾಹಸ ನಡೆಸಿದ್ದಾರೆ. ಯಂತ್ರೋಪಕರಣಗಳು ಸೇರಿದಂತೆ ದಾಸ್ತಾನು ಮಾಡಿದ್ದ ಸಾವಿರಾರು ಕ್ವಿಂಟಲ್ ಹತ್ತಿ ಸುಟ್ಟು ಹೋಗಿದೆ. ಭಾರಿ ಎತ್ತರದವರೆಗೆ ಬೆಂಕಿಯ ಕೆನ್ನಾಲಿಗೆ ಚಾಚಿ ದಟ್ಟ ಹೊಗೆ ಇಡೀ ಪ್ರದೇಶದ ಸುತ್ತ ಆವರಿಸಿತ್ತು.
