ಬೆಂಗಳೂರು: ನಗರದ ಆರ್.ವಿ. ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗದ ರೈಲಿನ ಸಂಚಾರವನ್ನು ನಿಗದಿತ ಅವಧಿಗಿಂತ ಮೊದಲೇ ಆರಂಭಿಸುವಂತೆ ಒತ್ತಾಯಿಸಿ 15 ಜನರ ಗುಂಪು ರೈಲನ್ನು ತಡೆದು ಗಲಾಟೆ ಮಾಡಿದ ಘಟನೆ ಸೋಮವಾರ ನಡೆದಿದೆ.
ಇದರಿಂದ ರಾಷ್ಟ್ರೀಯ ವಿದ್ಯಾಲಯ ಹಳದಿ ಮೆಟ್ರೋ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಡಬೇಕಿದ್ದ ರೈಲು 6.30ಕ್ಕೆ ಹೊರಟಿದೆ. ಹಳದಿ ಮಾರ್ಗದ ಉಳಿದ ಪ್ರಯಾಣಿಕರು ತೊಂದರೆಗೀಡಾಗಿದ್ದು, ರೈಲು ತಡೆದ ಗುಂಪಿನ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮದ ವತಿಯಿಂದ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಪ್ರತಿದಿನ ಹಸಿರು ಮತ್ತು ನೇರಳೆ ಮಾರ್ಗದ ರೈಲುಗಳ ಸೇವೆ ಬೆಳಗ್ಗೆ 5 ಗಂಟೆಗೆ ಆರಂಭವಾಗುತ್ತದೆ. ಹಳದಿ ಮಾರ್ಗದ ರೈಲು ಸೇವೆ 6 ಗಂಟೆಗೆ ಶುರುವಾಗುತ್ತದೆ. ಇದರಿಂದ ಎರಡು ರೈಲುಗಳಲ್ಲಿ ಬಂದ ಪ್ರಯಾಣಿಕರು ಹಳದಿ ಮಾರ್ಗದ ರೈಲಲ್ಲಿ ಸಂಚರಿಸಲು ಹೆಚ್ಚಿನ ಸಮಯ ಕಾಯಬೇಕು ಎಂದು ಪ್ರಯಾಣಿಕರು ದೂರಿದ್ದಾರೆ.
ಇದೇ ಕಾರಣಕ್ಕೆ ಹಸಿರು ಮಾರ್ಗದ ಮೂಲಕ ಬಂದ ಪ್ರಯಾಣಿಕರ ಪೈಕಿ ಸುಮಾರು 15 ಜನ ಹಳದಿ ಮಾರ್ಗದಲ್ಲಿ ಬೆಳಗ್ಗೆ 5:55 ಕ್ಕೆ ರೈಲು ಆಗಮಿಸಿ 6 ಗಂಟೆಗೆ ಹೊರಡಲು ಅನುವಾಗುತ್ತಲೇ ಅಡ್ಡಿಪಡಿಸಿದ್ದಾರೆ. ರೈಲು ಆಪರೇಟರ್, ಸ್ಟೇಷನ್ ನಿಯಂತ್ರಕರು, ಭದ್ರತಾ ಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿದರೂ ಮಾತು ಕೇಳಿಲ್ಲ. ಅಂತಿಮವಾಗಿ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಮೆಟ್ರೋ ರೈಲು ವಿಳಂಬ ಖಂಡಿಸಿ ರೈಲು ತಡೆದಿದ್ದ ಹಿನ್ನೆಲೆಯಲ್ಲಿ ರೈಲು ತಡೆದಿದ್ದ ಪ್ರಯಾಣಿಕರ ವಿರುದ್ಧ ಕೇಸು ದಾಖಲಾಗಿದೆ. ಜಯನಗರ ಪೊಲೀಸ್ ಠಾಣೆಗೆ ಬಿಎಂಆರ್ಸಿಎಲ್ ಅಧಿಕಾರಿಗಳು ದೂರು ನೀಡಿದ್ದಾರೆ.
