ಬೆಂಗಳೂರು : ರಾಜ್ಯದಲ್ಲಿ ವಿಕಲಚೇತನರಿಗಿರುವ ಸೌಲಭ್ಯ , ಯೋಜನೆಗಳು ಯಾವುದು..? ಅವರಿಗೆ ಸರ್ಕಾರ ಯಾವೆಲ್ಲಾ ಸೌಲಭ್ಯಗಳನ್ನ ನೀಡುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ:
ಎಸ್.ಎಸ್.ಎಲ್.ಸಿ. ನಂತರ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ, ಔದ್ಯೋಗಿಕ ಶಿಕ್ಷಣಗಳಿಗೆ ನಿಯಮಾನುಸಾರ ಆಯ್ಕೆಯಾಗುವ ವಿಕಲಚೇತನ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿರುವ ವರೀಕ್ಷಾ ಶುಲ್ಕ ಬೋಧನಾ ಶುಲ್ಕ. ಪ್ರಯೋಗಾಲಯ ಶುಲ, ಕ್ರೀಡಾ ಶುಲ್ಕ ಹಾಗೂ ಗ್ರಂಥಾಲಯ ಶುಲ್ಕಗಳನ್ನು ಮರುಪಾವತಿಸಲಾಗುತ್ತಿದೆ.
ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ಯೋಜನೆ
ಎಸ್.ಎಸ್.ಎಲ್.ಸಿ. ನಂತರ ವ್ಯಾಸಂಗ ಮಾಡುತ್ತಿರುವ ದೃಷ್ಟಿದೋಷವುಳ್ಳ ವಿಕಲಚೇತನ ವಿದ್ಯಾರ್ಥಿಗಳು ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಾಂಶದ ಉಪಯೋಗದಿಂದ ಉನ್ನತ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವಂತೆ ಟಾಕಿಂಗ್ ಲ್ಯಾಪ್ ಟಾಪ್ಗಳನ್ನು ನೀಡಲಾಗುತ್ತಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಕ್ರಮವಹಿಸಲಾಗುತ್ತಿದೆ.
ಅಂಧ ವಿದ್ಯಾರ್ಥಿಗಳಿಗೆ “ಬೈಲ್ ಕಿಟ್ ಗಳ ವಿತರಿಸುವ ಯೋಜನೆ:
ಅಂಧ ವಿದ್ಯಾರ್ಥಿಗಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಾವಲಂಬಿಗಳಾಗಲು ರಾಜ್ಯದ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್, ಬೈಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತು ಇನ್ನಿತರ ಸಾಧನೆಗಳನ್ನು ಒಳಗೊಂಡ ತಲಾ ರೂ 25,000/ ಗಳ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ
ಸರ್ಕಾರಿ ವಿಶೇಷ ಶಾಲೆಗಳು:
ಸರ್ಕಾರದ ವತಿಯಿಂದ 1 ರಿಂದ 10ನೇ ತರಗತಿಯವರೆಗೆ ಒಟ್ಟು 09 ಶಾಲೆಗಳನ್ನು ನಡೆಸಲಾಗುತ್ತಿದ್ದು. ಈ ಪೈಕಿ ಶ್ರವಣದೋಷವುಳ್ಳ ಮಕ್ಕಳಿಗಾಗಿ 05 (ಬೆಂಗಳೂರು ನಗರ, ಬಳ್ಳಾರಿ, ಕಲಬುರಗಿ, ಬೆಳಗಾವಿ ಮತ್ತು ಮೈಸೂರು) ಹಾಗೂ ದೃಷ್ಟಿದೋಷವುಳ್ಳ ಮಕ್ಕಳಿಗಾಗಿ 04 (ಮೈಸೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ಕಲಬುರಗಿ) ವಿಶೇಷ ಶಾಲೆಗಳನ್ನು ನಡೆಸಲಾಗುತ್ತಿದೆ.
ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆ:
ಅಂಗವಿಕಲ ಮಕ್ಕಳ ಕೇಂದ್ರೀಕೃತ ವಿಶೇಷ ಶೈಕ್ಷಣಿಕ ಯೋಜನೆಯಡಿ ಬುದ್ಧಿಮಾಂದ್ಯ (ಸೆರಬ್ರಲ್ ಪಾಲ್ಸಿ, ಆಟಿಸಂ), ದೃಷ್ಟಿದೋಷ, ಶ್ರವಣದೋಷವುಳ್ಳ ಮಕ್ಕಳಿಗಾಗಿ ವಸತಿಯುತ ಹಾಗೂ ವಸತಿರಹಿತ ಶಾಲೆಗಳು ಸೇರಿದಂತೆ ಒಟ್ಟು 164 (113 ವಸತಿಯುತ & 51 ವಸತಿರಹಿತ) ವಿಶೇಷ ಶಾಲೆಗಳು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ಸದರಿ ಯೋಜನೆಯಡಿ ಮಾನಸಿಕ ಅಸ್ವಸ್ಥ, ಸೆರಬ್ರಲ್ ಪಾಲ್ಸಿ, ಆಟಿಸಂ ಮಕ್ಕಳ ಹಗಲು ಯೋಗಕ್ಷೇಮ ಕೇಂದ್ರಗಳು ನಡೆಯುತ್ತಿವೆ. ಸೆರಬ್ರಲ್ ಪಾಲ್ಸಿ, ಆಟಿಸಂ, ಮಾನಸಿಕ ಅಸ್ವಸ್ಥ ಹಾಗೂ ತೀವ್ರತರದ ಅಂಗವೈಕಲ್ಯತೆ ಹೊಂದಿರುವ ಮೂರರಿಂದ 25 ವರ್ಷದ ಒಳಗಿನ ಮಕ್ಕಳಿಗಾಗಿ 02 ಹಗಲು ಯೋಗಕ್ಷೇಮ ಕೇಂದ್ರಗಳನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸುತ್ತಿದ್ದು ಪ್ರತಿ ಕೇಂದ್ರದಲ್ಲಿ 25 ಮಕ್ಕಳನ್ನು ದಾಖಲಿಸಲು ಅವಕಾಶವಿರುತ್ತದೆ.
ಸದರಿ ಶಾಲೆಗಳ ನಿರ್ವಹಣೆಗಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು (ಪ್ರತಿ ಬುದ್ಧಿಮಾಂದ್ಯ ವಸತಿಯುತ ಮಗುವಿಗೆ ಮಾಹೆಯಾನ ರೂ. 10,200/-, ಬುದ್ಧಿಮಾಂದ್ಯ ವಸತಿ ರಹಿತ ಮಗುವಿಗೆ ರೂ.9000/-, ಶ್ರವಣದೋಷ/ದೃಷ್ಟಿದೋಷ ವಸತಿಯುತ ಮಗುವಿಗೆ ರೂ.9300/- ಮತ್ತು ವಸತಿರಹಿತ ಮಗುವಿಗೆ ರೂ.7800/-) ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುತ್ತಿದ್ದು ಈ ಅನುದಾನದಲ್ಲಿ ಶಿಕ್ಷಕರ ಗೌರವಧನ, ಪಥ್ಯಾಹಾರ ವೆಚ್ಚ, ವೈದ್ಯಕೀಯ ವೆಚ್ಚ. ಸಮವಸ್ತ್ರ ಭತ್ಯೆ ಸಾರಿಗೆ ಭತ್ಯೆ, ಕಟ್ಟಡದ ಬಾಡಿಗೆ /ನಿರ್ವಹಣಾ ವೆಚ್ಚ, ಸಾದಿಲ್ವಾರು ವೆಚ್ಚ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
1982ರ ರಾಜ್ಯ ಅನುದಾನ ಸಂಹಿತೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳು
1982ರ ರಾಜ್ಯ ಅನುದಾನ ಸಂಹಿತೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 33 ವಿಶೇಷ ಶಾಲೆ/ ತರಬೇತಿ ಕೇಂದ್ರಗಳನ್ನು ದೈಹಿಕ, ಅಂಧ, ಶ್ರವಣದೋಷ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗಾಗಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಅನುದಾನವನ್ನು ಜಿಲ್ಲಾ ಪಂಚಾಯತ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.
ವಿಕಲಚೇತನರಲ್ಲಿಯ ಅಂಗವಿಕಲತೆಯನ್ನು ನಿರ್ಧರಿಸಲು ವೈದ್ಯಕೀಯ ಪ್ರಾಧಿಕಾರ ಹಾಗೂ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ (ಯು.ಡಿ.ಐ.ಡಿ) ವಿತರಣೆ:
ಈ ಯೋಜನೆಯು ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಯಾಗಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರವು 2019ರಲ್ಲಿ ಅನುಷ್ಠಾನಗೊಳಿಸಿರುತ್ತದೆ. ಈ ಯೋಜನೆಯಡಿಯಲ್ಲಿ ನೀಡಲಾಗುವ ಗುರುತಿನ ಚೀಟಿಯನ್ನು ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ವಿಶೇಷಚೇತನ ಮಕ್ಕಳನ್ನೂ ಒಳಗೊಂಡಂತೆ ಉಪಯೋಗಿಸಿಕೊಳ್ಳಬಹುದಾಗಿದೆ. ರಾಜ್ಯ ಸರ್ಕಾರದಿಂದ ನೇಮಿಸಲಾಗುವ ವೈದ್ಯಕೀಯ ಪ್ರಾಧಿಕಾರಗಳಿಂದ ದೃಢೀಕರಿಸಲಾಗುವ ವೈದ್ಯಕೀಯ ಪ್ರಮಾಣ ಪತ್ರದ ಸಮಗ್ರ ಮಾಹಿತಿಯುಳ್ಳ ಗಣಕೀಕೃತ ಗುರುತಿನ ಚೀಟಿಯನ್ನು ವಿಕಲಚೇತನ ವ್ಯಕ್ತಿಗಳಿಗೆ ನೀಡುವ ವ್ಯವಸ್ಥೆಯಾಗಿದ್ದು, ಇದರಲ್ಲಿ ವಿಕಲಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣವನ್ನು ನಮೂದಿಸಲಾಗಿರುತ್ತದೆ.
ಸಾಧನೆ ಯೋಜನೆ
ವಿಕಲಚೇತನ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ ಧನಸಹಾಯ ನೀಡಲು “ಸಾಧನೆ” ಎಂಬ ಯೋಜನೆಯು ಜಾರಿಯಲ್ಲಿದ್ದು, ಕ್ರೀಡೆಗಳಲ್ಲಿ ವಿಶೇಷ ಸಾಧನೆಗೈದ ವಿಕಲಚೇತನ ಮಕ್ಕಳನ್ನೂ ಒಳಗಂಡಂತೆ ಎಲ್ಲಾ ವಿಕಲಚೇತನರಿಗೆ ರೂ.50,000/-ಗಳ ಧನ ಸಹಾಯವನ್ನು ನೀಡಲಾಗುತ್ತಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಅಂಗವಿಕಲತೆಯನ್ನು ನಿವಾರಿಸುವ ಶಸ್ತ್ರಚಿಕಿತ್ಸೆಗಾಗಿ ವೈದ್ಯಕೀಯ ಪರಿಹಾರ ನಿಧಿ ಯೋಜನೆ
ಅಂಗವಿಕಲ ವ್ಯಕ್ತಿಗಳೂ ಹಾಗೂ ವಿಶೇಷ ಚೇತನ ಮಕ್ಕಳ ಅಂಗವಿಕಲತೆಯನ್ನು ನಿವಾರಿಸಲು ಶಸ್ತ್ರ, ಚಿಕಿತ್ಸೆಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಸಂಜಯಗಾಂಧಿ ಆಸ್ಪತ್ರೆಯಲ್ಲಿ ಹಾಗೂ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಅಂಗವಿಕಲತೆ ನಿವಾರಣಾ ಶಸ್ತ್ರ ಚಿಕಿತ್ಸೆಗಾಗಿ ರೂ.1.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಲಾಗುತ್ತಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳು
ವಿಕಲಚೇತನ ಮಕ್ಕಳನ್ನೂ ಒಳಗೊಂಡಂತೆ ವಿವಿಧ ರೀತಿಯ ವಿಕಲಚೇತನರನ್ನು ಗುರುತಿಸಿ ಅವರಿಗೆ ಶೈಕ್ಷಣಿಕ, ಉದ್ಯೋಗ ಮತ್ತು ತರಬೇತಿ, ಸಾಮಾಜಿಕ ಭದ್ರತೆ ಹಾಗೂ ಪುನರ್ವಸತಿ ಸೇವೆಗಳನ್ನು ಅವರ ಮನೆ ಬಾಗಿಲಿನಲ್ಲಿಯೇ ಒದಗಿಸಿ ಅವರ ಸರ್ವಾಂಗೀಣ ಪುನರ್ವಸತಿಯನ್ನು ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಗಳನ್ನು ಭಾರತೀಯ ರೆಡ್ ಕ್ರಾಸ್ ಸೊಸೈಟಿ, ವೈದ್ಯಕೀಯ ಮಹಾವಿದ್ಯಾಲಯಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ. ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು, ಪುನರ್ವಸತಿ ಕೇಂದ್ರದ ಎಲ್ಲಾ ಚಟುವಟಿಕೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವ ಕುರಿತು ಸದರಿ ಸಮಿತಿಯು ಮೇಲ್ವಿಚಾರಣೆ ಮಾಡಲಾಗುತ್ತದೆ.
ಬ್ಯಾಟರಿ ಚಾಲಿತ ವೀಲ್ ಚೇರ್
2023-24ನೇ ಸಾಲಿನಿಂದ ಬ್ಯಾಟರಿ ಚಾಲಿತ ವಿಲ್ಚೇರ್ಗಳನ್ನು ವಿಕಲಚೇತನರಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದೈಹಿಕ ವಿಕಲಚೇತನರಿಗೆ ವಿಶೇಷ ಚೇತನ ಮಕ್ಕಳನ್ನೂ ಒಳಗೊಂಡಂತೆ ಬ್ಯಾಟರಿ ಚಾಲಿತ ವಿಲ್ ಚೇರ್ಗಳನ್ನು ವಿತರಿಸಲಾಗುತ್ತಿದೆ.
ಶ್ರವಣದೋಷವುಳ್ಳ ಮಕ್ಕಳ ಹಾಗೂ ತಾಯಂದಿರ ತರಬೇತಿ ಕೇಂದ್ರ
0-4 ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳ ತಾಯಂದಿರಿಗೆ ಪ್ರಾರಂಭಿಕ ಹಂತದಲ್ಲಿಯೇ ಅವರ ಮಗುವಿನ ಸಮಸ್ಯೆ ಮತ್ತು ಪರಿಹಾರದ ಬಗ್ಗೆ ಅರಿವು ಮೂಡಿಸಲು ತರಬೇತಿ ನೀಡುವ ಅವಶ್ಯಕತೆ ಇರುವುದರಿಂದ ನಾಲ್ಕು ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳಿಗೆ ಅವರ ತಾಯಂದಿರ ಸಹಿತ ವಾಕ್ ತರಬೇತಿ ಕೇಂದ್ರವನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಬೆಂಗಳೂರು ನಗರ, ತುಮಕೂರು, ಕಲಬುರ್ಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.
ಬುದ್ಧಿಮಾಂದ್ಯ ಮಕ್ಕಳ ಪೋಷಕರಿಗೆ ವಿಮಾ ಯೋಜನ:
ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ/ತಾಯಿ/ಪೋಷಕರ ಹೆಸರಲ್ಲಿ, ಭಾರತೀಯ ಜೀವ ವಿಮಾ ನಿಗಮಕ್ಕೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದಿಂದ ವಾರ್ಷಿಕ ವಿಮಾ ಕಂತನ್ನು ಪಾವತಿ ಮಾಡಿ ವಿಮಾ ಸೌಲಭ್ಯವನ್ನು ಒದಗಿಸಲಾಗುತ್ತದೆ. ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ/ತಾಯಿ/ಪೋಷಕರ ನಿಧನದ ಹೊಂದಿದ ಪಕ್ಷದಲ್ಲಿ ಬುದ್ಧಿಮಾಂದ್ಯ ವ್ಯಕ್ತಿಗಳ ಪೋಷಣೆಗಾಗಿ ಜೀವವಿಮಾ ನಿಗಮದಿಂದ ನಾಮನಿರ್ದೇಶಿತರಿಗೆ ತಲಾ 20,000/- ರಂತೆ ವಿಮಾ ಹಣ ದೊರೆಯುತ್ತದೆ.
ವಿಕಲಚೇತನರಿಗೆ ಸಾಧನ ಸಲಕರಣೆಗಳು:
ಈ ಯೋಜನೆಯಡಿ ವಿಶೇಷ ಚೇತನ ಮಕ್ಕಳನ್ನೂ ಒಳಗೊಂಡಂತೆ ವಿಕಲಚೇತನರಿಗೆ ಅವಶ್ಯವಾಗಿರುವ ಸಾಧನ ಸಲಕರಣೆಗಳನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ರೂ.15,000/-ಗಳ ಮಿತಿಯೊಳಗೆ ವಿಕಲಚೇತನರಿಗೆ ಅವಶ್ಯವಿರುವ ಗಾಲಿಕುರ್ಚಿ, ಸಾದಾ ತ್ರಿಚಕ್ರವಾಹನ, ಕ್ಯಾಲಿರ್ಸ್ ಕಚಸ್, ಶ್ರವಣಸಾಧನ, ವೈಟ್ಕೇನ್, ಬ್ರೇಲ್ಾಚ್ ಇನ್ನಿತರ ಸಲಕರಣೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಕ್ರಮವಹಿಸಲಾಗುತ್ತಿದೆ.
ಆರೈಕೆದಾರರ ಪ್ರೋತ್ಸಾಹ ಧನ
Cerebral Palsy, Muscular Dystrophy, Parkinsons 2 Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಹಾಗೂ ವಿಶೇಷ ಚೇತನ ಮಕ್ಕಳನ್ನೂ ಒಳಗೊಂಡಂತೆ ಆರೈಕೆ ಮಾಡುತ್ತಿರುವವರಿಗೆ ಪ್ರತಿ ಮಾಹೆ ರೂ.1,000/-ಗಳ ಪ್ರೋತ್ಸಾಹ ಧನ ನೀಡುವ ಯೋಜನೆಯಾಗಿದೆ. 2025-26ನೇ ಸಾಲಿನ ಮಾನ್ಯ ಮುಖ್ಯ ಮಂತ್ರಿಯವರ ಆಯವ್ಯಯ ಭಾಷಣದಲ್ಲಿ ಈ ಆರೈಕೆದಾರರ ಭತ್ಯೆಯನ್ನು ಬೌದ್ಧಿಕ ವಿಕಲತೆ, ಬಹುವಿಧ ಅಂಗವಿಕಲತೆ (ಡೆಫ್ ಬ್ಲೆಂಡ್). ಆಟಿಸಂ ವಿಕಲತೆಯಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಆರೈಕೆ ಮಾಡುತ್ತಿರುವ ಆರೈಕೆದಾರರಿಗೂ ವಿಸ್ತರಿಸಲಾಗಿದೆ.



