ಹುಬ್ಬಳ್ಳಿ: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ಹಾಗೂ ಡೀಸೆಲ್ ಟ್ಯಾಂಕರ್ ಅಪಘಾತದಲ್ಲಿ 45 ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿಯ ಗಣೇಶ್ ಪೇಟ್ ನಿವಾಸಿ ಅಬ್ದುಲ್ ಘಣಿ (55) ಅಪಘಾತದಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅಬ್ದುಲ್ ಘಣಿ ಅಬುದಾಬಿಯ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ದುಬೈಗೆ ಹೋಗಿದ್ದರು. ಇದೀಗ ಸೌದಿ ಅರೇಬಿಯಾದ ಮೆಕ್ಕಾ-ಮದೀನಾ ರಸ್ತೆಯಲ್ಲಿ ಬಸ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಅಬ್ದುಲ್ ಕೂಡ ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹುಬ್ಬಳ್ಳಿಯ ಅಬ್ದುಲ್ ಕುಟುಂಬದವರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಮೆಕ್ಕಾದಿಂದ ಮದೀನಾಗೆ ಹೋಗುತ್ತಿದ್ದ ವೇಳೆ ಬಸ್, ಡೀಸೆಲ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ಸ್ಥಳದಲ್ಲೇ 45 ಜನರು ಸಜೀವದಹನವಾಗಿದಾರೆ. ಮೃತರಲ್ಲಿ ಬಹುತೇಕರು ತೆಲಂಗಾಣದವರು ಎಂದು ತಿಳಿದುಬಂದಿದೆ.
