ಬೆಂಗಳೂರು: ಬೆಂಗಳೂರಿನ ಮಹಿಳೆಯನ್ನು ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಸಿದ ಸೈಬರ್ ವಂಚಕರು 31.83 ಕೋಟಿ ರೂ. ಸುಲಿಗೆ ಮಾಡಿದ ಘಟನೆ ನಡೆದಿದ್ದು, ಇದುವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಹಣ ಕಳೆದುಕೊಂಡ ಡಿಜಿಟಲ್ ಅರೆಸ್ಟ್ ಪ್ರಕರಣ ಇದಾಗಿದೆ.
ಐಟಿ ಕ್ಷೇತ್ರದ ಹಿರಿಯ ಉದ್ಯೋಗಿಯಾಗಿರುವ 57 ವರ್ಷದ ಸಂತ್ರಸ್ತೆ ಇಂದಿರಾ ನಗರ ನಿವಾಸಿಯಾಗಿದ್ದು, ಅವರು ನೀಡಿದ ದೂರು ಆಧರಿಸಿ ಪೂರ್ವ ಸೈಬರ್ ಕ್ರೈಂ ಕಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
2024ರ ಸೆಪ್ಟೆಂಬರ್ 15ರಂದು ಕರೆ ಮಾಡಿದ ವ್ಯಕ್ತಿ ತಾನು ಡಿಹೆಚ್ಎಲ್ ಕೋರಿಯರ್ ಸರ್ವಿಸ್ ನಿಂದ ಕರೆ ಮಾಡಿರುವುದಾಗಿ ಹೇಳಿದ್ದು, ಮುಂಬೈನ ಅಂಧೇರಿಯ ಕೇಂದ್ರದಿಂದ ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್ ನಲ್ಲಿ ಮೂರು ಕ್ರೆಡಿಟ್ ಕಾರ್ಡ್, ನಾಲ್ಕು ಪಾಸ್ಪೋರ್ಟ್ ಮತ್ತು ಎಂಡಿಎಂಎ ಡ್ರಗ್ಸ್ ಇದೆ ಎಂದು ಬೆದರಿಸಿದ್ದಾನೆ. ತನಗೂ ಪಾರ್ಸೆಲ್ ಗೂ ಸಂಬಂಧವಿಲ್ಲ ಎಂದು ಸಂತ್ರಸ್ತೆ ಹೇಳಿದಾಗ ಪಾರ್ಸೆಲ್ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಇದೆ ಇದು ಸೈಬರ್ ಅಪರಾಧವಾಗಿದ್ದು, ಸೈಬರ್ ಸೆಲ್ ಗೆ ವರದಿ ಮಾಡಿಕೊಳ್ಳುವಂತೆ ಸಲಹೆ ನೀಡಿ ಮತ್ತೊಬ್ಬ ವ್ಯಕ್ತಿಗೆ ಕರೆ ವರ್ಗಾಯಿಸಿದ್ದಾನೆ. ಆತ ತನ್ನನ್ನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ.
ಸಂತ್ರಸ್ತೆ ಮೇಲೆ ವಂಚಕರು ನಿಗಾ ಇಟ್ಟಿದ್ದರಿಂದ ಮಹಿಳೆ ಸ್ಥಳೀಯ ಪೊಲೀಸರು, ಕಾನೂನು ನೆರವು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಕುಟುಂಬದವರಿಗೆ ವಿಷಯ ತಿಳಿಸಿದರೆ ಅವರ ಹೆಸರನ್ನು ಕೂಡ ಪ್ರಕರಣದಲ್ಲಿ ಸೇರಿಸುವುದಾಗಿ ವಂಚಕರು ಬೆದರಿಸಿದ್ದಾರೆ.
ಮಗನ ಮದುವೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ವಂಚಕರ ಮಾತು ಕೇಳಿ ತಮ್ಮ ನಿಶ್ಚಿತ ಠೇವಣಿ, ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ನಂತರ ವಂಚಕರು ತಮ್ಮ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದ್ದು, ಮಗನ ಮದುವೆ, ವಿದೇಶ ಪ್ರಯಾಣ ಮತ್ತು ಅನಾರೋಗ್ಯದ ಕಾರಣದಿಂದಾಗಿ ಮಹಿಳೆ ತಡವಾಗಿ ದೂರು ನೀಡಿದ್ದಾರೆ.
ನವೆಂಬರ್ 14ರಂದು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ವಂಚಕರ ಖಾತೆಗೆ 31.83 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ. 187 ಬಾರಿ ವಹಿವಾಟು ನಡೆದಿರುವುದು ಗೊತ್ತಾಗಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
