ಕಾಸರಗೋಡು: ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಮಂಡಲ, ಮಕರ ಜ್ಯೋತಿ ಮಾಸಾಚರಣೆ ಹಿನ್ನೆಲೆಯಲ್ಲಿ ನವೆಂಬರ್ 16ರಂದು ಗರ್ಭಗುಡಿ ಬಾಗಿಲು ತೆರೆಯಲಾಗುವುದು. ಇದರೊಂದಿಗೆ ಶಬರಿಮಲೆ ಯಾತ್ರೆ ಆರಂಭವಾಗಲಿದ್ದು, ಕೇರಳದಲ್ಲಿ ಮೆದುಳು ಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸುವಂತೆ ಸರ್ಕಾರ ಸೂಚನೆ ನೀಡಿದೆ.
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 17 ರಿಂದ ಆರಂಭವಾಗುವ ಶಬರಿಮಲೆ ಯಾತ್ರಿಕರಿಗಾಗಿ ಕೇರಳ ಸರ್ಕಾರದಿಂದ ಆರೋಗ್ಯ ಮಾರ್ಗದರ್ಶಿ ಬಿಡುಗಡೆ ಮಾಡಲಾಗಿದೆ.
ಯಾತ್ರಿಕರು ನದಿಯಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ತಾಗದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯ ಔಷಧಗಳನ್ನು ತರಬೇಕು. ಯಾತ್ರೆ ಆರಂಭಿಸುವ ಕೆಲವು ದಿನಗಳ ಮೊದಲೇ ವಾಕಿಂಗ್ ಅಭ್ಯಾಸ ರೂಢಿಸಿಕೊಳ್ಳಬೇಕು. ಬೆಟ್ಟ ಹತ್ತುವಾಗ ಅವಸರ ಮಾಡದೆ ನಿಧಾನವಾಗಿ ಹತ್ತಿ, ಆರೋಗ್ಯ ಸಹಾಯ ಬೇಕಿದ್ದಲ್ಲಿ ಕೂಡಲೇ ಸಿಬ್ಬಂದಿಯನ್ನು ಸಂಪರ್ಕಿಸಿ, ಹಾವು ಕಡಿದಲ್ಲಿ ತಕ್ಷಣವೇ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಿ ಎಂದು ತಿಳಿಸಲಾಗಿದೆ.
ಯಾತ್ರಿಕರಿಗೆ ಬಯಲು ಬಹಿರ್ದೆಸೆ ನಿಷೇಧಿಸಲಾಗಿದ್ದು, ನಿಗದಿತ ಸ್ಥಳಗಳಲ್ಲಿ ಶೌಚ ಕರ್ಮ ಮುಗಿಸಿ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಕೇವಲ ಬಿಸಿ ನೀರನ್ನು ಕುಡಿಯಬೇಕು. ತುರ್ತು ಪರಿಸ್ಥಿತಿಗೆ 04735 203232 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಲಾಗಿದೆ.
