ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬೆಳಗಾವಿ ನಗರದಲ್ಲಿ ನಕಲಿ ಕಾಲ್ ಸೆಂಟರ್ ಸ್ಥಾಪಿಸಿ, ಅಮೆರಿಕಾ ಪ್ರಜೆಗಳನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಗ್ಯಾಮ್ಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿಯ ಬಾಕ್ಸೈಟ್ ರೋಡ್ ನಲ್ಲಿರುವ ಕುಮಾರ ಹಾಲ್ ನಲ್ಲಿ ಅಂತಾರಾಷ್ಟ್ರೀಯ ಕಾಲ್ ಸೆಂಟರ್ ಕೆಲಸ ಮಾಡುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಇಂಟರನ್ಯಾಷನಲ್ ಫ್ರಾಡ್ ಕಾಲ್ ಸೆಂಟರ್ ಸೀಜ್ ಮಾಡಿದ್ದಾರೆ.
ದಾಳಿಯ ವೇಳೆ 37 ಲ್ಯಾಪಟಾಟ್, 37 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಅಸ್ಸಾಂ, ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ, ಮಹಾರಾಷ್ಟ್ರ, ಮೇಘಾಲಯ, ರಾಜಸ್ಥಾನ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ನಾಗಾಲ್ಯಾಂಡ್ ಸೇರಿ ವಿವಿಧ ರಾಜ್ಯಗಳ ಮತ್ತು ನೇಪಾಳದ ಒಬ್ಬ ಸೇರಿ 33 ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಮಾತನಾಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, 33 ಜನರು 11 ಬೇರೆ ಬೇರೆ ಕಥೆಗಳ ಮೂಲಕ ಜನರಿಗೆ ಮೋಸ ಮಾಡುತ್ತಿದ್ದರು. ಅಮೆರಿಕಾ ನಾಗರಿಕರಿಗೆ ವಂಚನೆ ಮಾಡುತ್ತಿದ್ದರು. ಪ್ರಕರಣ ಕುರಿತು ಐಟಿ ಫರ್ಮ್ ಸಹಾಯ ಪಡೆದಿದ್ದೇವೆ. ಇದೊಂದು ದೊಡ್ಡ ಗ್ಯಾಂಗ್ ಇದ್ದು, ಗುಜರಾತ್, ಪಶ್ಚಿಮಬಂಗಾಲದಲ್ಲಿ ಇರುವ ಇಬ್ಬರು ಮಾಸ್ಟರ್ ಮೈಂಡ್ ಗಳನ್ನು ಬಂಧನ ಮಾಡಬೇಕಿದೆ. ಬರುವ ದಿನಗಳಲ್ಲಿ ಲ್ಯಾಪಟಾಪ್, ಫೋನ್ ಗಳನ್ನು ಪರಿಶೀಲನೆ ನಡೆಸಿ, ಎಷ್ಟು ಜನರಿಗೆ ಮೋಸ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕಿದೆ ಎಂದು ತಿಳಿಸಿದ್ದಾರೆ.
